ಮಂಗಳೂರು: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಗಾಲಾದರೂ ಯೋಗೇಶ್ ಗೌಡರ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ. ಆದರೆ, ವಿನಯ್ ಕುಲಕರ್ಣಿ ಬಿಜೆಪಿ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಅಪರಾಧಿ ಸ್ಥಾನದಲ್ಲಿದ್ದಾರೆ. ಈ ಕಾರಣದಿಂದ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ. ಸಿಬಿಐಗೆ ಸಾಕ್ಷ್ಯಾಧಾರ ಸಿಕ್ಕಿರುವುದರಿಂದ ವಶಕ್ಕೆ ಪಡೆದಿದ್ದಾರೆ. ಯೋಗೇಶ್ ಗೌಡ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ. ಈಗಲಾದರೂ ನ್ಯಾಯ ಸಿಕ್ಕಿದೆ ಎಂಬುದೇ ನಮ್ಮ ಅಭಿಪ್ರಾಯ ಎಂದರು.
ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ: ಕೆ.ಎಸ್ ಈಶ್ವರಪ್ಪ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳ ವಶದಲ್ಲಿರುವ ವಿನಯ್ ಕುಲಕರ್ಣಿ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದಿರುವುದು ಸ್ವಾಗತಾರ್ಹ, ಆದರೆ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ ಪಡೆದಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಚಿವ ಜಗದೀಶ್ ಶೆಟ್ಟರ್ ಸ್ವಾಗತಿಸಿದ್ದಾರೆ.
ವಿನಯ್ ಕುಲಕರ್ಣಿ ಬಗ್ಗೆ ಗುಮಾನಿ ಇತ್ತು: ಹೆಚ್‍ಡಿಕೆ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಪಾತ್ರದ ಬಗ್ಗೆ ಗುಮಾನಿ ಇತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸಿಬಿಐ ತನಿಖೆಯಿಂದ ಸತ್ಯಾಂಶ ಹೊರಬರಲಿ, ತನಿಖೆ ನ್ಯಾಯಸಮ್ಮತವಾಗಿ ನಡೆಯಲಿ ಎಂದು ಹೆಚ್‍ಡಿಕೆ ಹೇಳಿದ್ದಾರೆ.
ಜಯಮೃತ್ಯುಂಜಯ ಸ್ವಾಮೀಜಿ ಖಂಡನೆ
ಯೋಗೇಶ್‍ಗೌಡ ಕೊಲೆ ಪ್ರಕರಣ ಸಂಬಂಧ ವಿನಯ್ ಕುಲಕರ್ಣಿ ವಶಕ್ಕೆ ಪಡೆದಿರುವುದನ್ನು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯಸ್ವಾಮೀಜಿ ಖಂಡಿಸಿದ್ದಾರೆ.
ಪ್ರಕರಣವೊಂದರ ವಿಚಾರಣೆ ನೆಪದಲ್ಲಿ ವಿನಯ್ ಕುಲಕರ್ಣಿ ಅವರನ್ನು ಅಕ್ರಮವಾಗಿ ಕರೆದುಕೊಂಡು ಹೋಗಲಾಗಿದೆ. ಇದು ಲಿಂಗಾಯತ ಸಮಾಜದ ರಾಜ್ಯ ನಾಯಕನ ಮೇಲೆ ನಡೆಯುತ್ತಿರುವ ರಾಜಕೀಯ ದ್ವೇಷವಾಗಿದೆ. ಹೀಗಾಗಿ ವಿನಯ್ ಕುಲಕರ್ಣಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಜಯಮೃತ್ಯುಂಜಯಸ್ವಾಮೀಜಿ ಆಗ್ರಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel