ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಂಡಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ವಿನಯ್ ಕುಲಕರ್ಣಿ ವಿರುದ್ಧ ಆರೋಪಗಳ ಬಗ್ಗೆ ಸ್ಥಳೀಯ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಆದರೆ, ಹುಬ್ಬಳ್ಳಿ ಭಾಗದ ಬಿಜೆಪಿ ನಾಯಕರು ವಿನಯ್ ಕುಲಕರ್ಣಿ ವಿರುದ್ಧ ರಾಜಕೀಯವಾಗಿ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ವಿನಯ್ ಕುಲಕರ್ಣಿ ರಾಜಕೀಯವಾಗಿ ಪ್ರಬಲವಾಗಿರುವುದರಿಂದ ತಮಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಮಟ್ಟ ಹಾಕುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದರು.
ಸಿಬಿಐನವರು ಕಾನೂನು ಬದ್ಧವಾಗಿ ತನಿಖೆ ನಡೆಸುತ್ತಾರೆ. ಕಾನೂನಿಗೆ ವಿರುದ್ಧವಾಗಿ ಸಿಬಿಐ ಹೋಗುವುದಿಲ್ಲ. ಸಿಬಿಐನವರು ಒಂದಲ್ಲ, 10 ಬಾರಿ ವಿನಯ್ ಕುಲಕರ್ಣಿ ಅವರನ್ನು ಕರೆದೊಯ್ದು ವಿಚಾರಣೆ ನಡೆಸಲಿ, ಆದರೆ, ರಾಜಕೀಯ ಒತ್ತಡಕ್ಕೆ ಮಣಿಯಬೇಡಿ. ಸಿಬಿಐ ರಾಜಕೀಯ ವೆಪನ್ ಆಗಬಾರದು ಎಂಬುದು ನನ್ನ ಆಶಯವಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ, ಕೆ.ಜೆ ಜಾರ್ಜ್ ಅವರಿಗೆ ಎಷ್ಟು ಕಿರುಕುಳ ಆಯಿತು, ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಆದರೆ, ಸಿಬಿಐ ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ತನಿಖೆ ಮುಗಿದ ಬಳಿಕವೂ ಜಾರ್ಜ್ ವಿರುದ್ಧ ಮತ್ತೆ ತನಿಖೆಗೆ ಆಗ್ರಹಿಸಿದ್ದಾರೆ.
ರಾಜಕಾರಣದಲ್ಲಿ ಚಕ್ರ ತಿರುಗುತ್ತಿರುತ್ತದೆ. ಮೇಲಕ್ಕೆ ಹೋದ ಚಕ್ರ ಕೆಳಕ್ಕೆ ಬರಲೇಬೇಕು. ಈಗ ಬಿಜೆಪಿ ನಾಯಕರು ಖುಷಿ ಪಡುತ್ತಿದ್ದಾರೆ. ಕಾನೂನಿನ ಪ್ರಕಾರವೇ ವಿನಯ್ ಕುಲಕರ್ಣಿಗೆ ರಕ್ಷಣೆ ಸಿಗುತ್ತದೆ. ನಮ್ಮ ಕಾರ್ಯಕರ್ತರಾಗಲಿ, ಮುಖಂಡರಾಗಲಿ ತಪ್ಪು ಮಾಡಿಲ್ಲ ಚುನಾವಣೆ ಸಂದರ್ಭ ಹಾಗೂ ನಂತರ ಕಾಂಗ್ರೆಸ್ ನಾಯಕರನ್ನು ಬಿಜೆಪಿಯವರು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಸರ್ಕಾರಿ ತನಿಖಾ ಸಂಸ್ಥೆಗಳನ್ನು ಬಿಜೆಪಿಯವರು ತಮ್ಮ ಮನೆಯ ಆಸ್ತಿಯಂತೆ ತಿಳಿದುಕೊಂಡಿದ್ದಾರೆ. ಬಿಜೆಪಿ ನಾಯಕರು ಸಿಬಿಐ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ನಾನು ವಿನಯ್ ಕುಲಕರ್ಣಿ ಜತೆ ಬೆಂಬಲಕ್ಕೆ ಇದ್ದೇವೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳು ಹೇಗೆ ಕಾನೂನು ಕೈಗೆತ್ತಿಕೊಂಡಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ನಾನು ಮಾತನಾಡಲ್ಲ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel