ಬೀದರ್: ಭಾಲ್ಕಿ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಕ್ಷೇತ್ರದ ವಸತಿ ಯೋಜನೆ ಅಕ್ರಮ ಆರೋಪ ಸೇರಿ ವಿವಿಧ ವಿಷಯಗಳ ಕುರಿತು ಬೀದರ್ ಬಿಜೆಪಿ ಸಂಸದ ಭಗವಂತ್ ಖೂಬಾ ಹಾಗೂ ಖಂಡ್ರೆ ನಡುವೆ ನಡೆಯಬೇಕಿದ್ದ ಬಹಿರಂಗ ಚರ್ಚೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಬೀದರ್ ನಗರದ ಗಣೇಶ್ ಮೈದಾನದಲ್ಲಿ ಈಶ್ವರ್ ಖಂಡ್ರೆ ಹಾಗೂ ಭಗವಂತ್ ಖೂಭಾ ಬಹಿರಂಗ ಚರ್ಚೆಗೆ ಸಿದ್ದರಾಗಿದ್ದರು. ಆದರೆ, ಬಹಿರಂಗ ಚರ್ಚೆಗೆ ಅನುಮತಿ ನೀಡಲು ನಗರಸಭೆ ನಿರಾಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ಆದರೆ, ಈ ವಿಚಾರವನ್ನೇ ಕೈ-ಕಮಲ ನಾಯಕರು ವಾಕ್ಸಮರಕ್ಕೆ ಆಹಾರ ಮಾಡಿಕೊಂಡಿದ್ದಾರೆ. ಬಹಿರಂಗ ಚರ್ಚೆಗೆ ಅವಕಾಶ ನೀಡದಿದ್ದರೂ ಕಾರ್ಯಕರ್ತರ ಸಭೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ ಎಂದು ಸಂಸದ ಭಗವಂತ್ ಖೂಬಾ ಹೇಳಿದ್ದಾರೆ.
ಆಡಳಿತ ಪಕ್ಷ ಬಿಜೆಪಿ ಪ್ರಭಾವ ಬಳಸಿ ಸಂಸದ ಖೂಬಾ ಅನುಮತಿ ನೀಡದಂತೆ ತಡೆ ಹಿಡಿದಿದ್ದಾರೆ. ಹೀಗಾಗಿ ಖೂಬಾ ರಣಹೇಡಿ ಎಂದು ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.
ಆದರೆ, ಖಂಡ್ರೆ ಆರೋಪ ತಳ್ಳಿಹಾಕಿದ ಸಂಸದ ಖೂಬಾ, 70 ವರ್ಷದಿಂದ ರಾಜಕೀಯದಲ್ಲಿರುವ ಖಂಡ್ರೆ ಪರಿವಾರದಿಂದ ಈ ರೀತಿ ಆರೋಪ ಮಾಡುತ್ತಿರುವ ಅವರಿಗೆ ಅರಿವು ಇದೆಯಾ, ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಾನು ರಂಗಮಂದಿರದಲ್ಲಿ ಆರೋಗ್ಯಕರ ಚರ್ಚೆಗೆ ಸಿದ್ದನಿದ್ದೆ. ಹೊರಗಡೆ ಗ್ರೌಂಡ್ ನಲ್ಲಿ ಚರ್ಚೆಯಾದರೆ ಕಾರ್ಯಕರ್ತರ ಮಧ್ಯ ಗಲಾಟೆ ಆಗುವ ಸಾಧ್ಯತೆ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾಲ್ಕಿಯಲ್ಲಿ ಮನೆ ಹಂಚಿಕೆಯಲ್ಲಿ ಹಗರಣ ನಡೆದಿದ್ದು ಸಾಬೀತಾಗಿದೆ. ಈಶ್ವರ್ ಖಂಡ್ರೆ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನಾವು ಕೂಡ ಹೋರಾಟ ಮಾಡುತ್ತೇವೆ ಎಂದು ಸಂಸದ ಭಗವಂತ್ ಖೂಬಾ ತಿಳಿಸಿದ್ದಾರೆ.
ವಸತಿ ಹಂಚಿಕೆ ವಿವಾದ ಏನು..
ಭಾಲ್ಕಿಯಲ್ಲಿ ಸುಮಾರು 16 ಸಾವಿರ ಕುಟುಂಬಗಳಿಗೆ ಮನೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ 9 ಸಾವಿರ ಮನೆಗಳು ಉಳ್ಳವರಿಗೆ, ಮನೆ-ಮಠ ಇದ್ದವರಿಗೆ ನೀಡಲಾಗಿದೆ ಎಂಬುದು ಬಿಜೆಪಿ ಆರೋಪ. ನಕಲಿ ಹಕ್ಕು ಪತ್ರ ಹಂಚಿಕೆ ಮಾಡಿ ಐ ಶಾಸಕ ಈಶ್ವರ್ ಖಂಡ್ರೆ ಚುನಾವಣೆಯಲ್ಲಿ ಗೆಲುವು ಸಾಧಿಸಿದಾರೆಂದು ಬಿಜೆಪಿ ಆರೋಪವಾಗಿದೆ.
ಆದರೆ, 9 ಸಾವಿರ ಫಲಾನುಭವಿಗಳಿಗೆ ಬಿಡುಗಡೆಯಾಗಬೇಕಿದ್ದ ಹಣವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪವಾಗಿದೆ. ಕಳೆದೆರಡು ವರ್ಷಗಳಿಂದ ಖೂಬಾ-ಖಂಡ್ರೆ ನಡುವೆ ಆರೋಪ ಪ್ರತ್ಯಾರೋಪಗಳ ನಡೆಯುತ್ತಿದ್ದವು.
ಆರೋಪ ಬಿಟ್ಟು ಬಹಿರಂಗ ಚರ್ಚೆ ಮಾಡೋಣ ಎಂದು ಖಂಡ್ರೆ-ಖೂಬಾ ರೆಡಿಯಾಗಿದ್ದರು. ಈ ಮೂಲಕ ಗಡಿನಾಡು ಬೀದರ್ ಜಿಲ್ಲೆಯಲ್ಲಿ ಖಂಡ್ರೆ ಮತ್ತು ಖೂಬಾ ಕಾರ್ಯಕರ್ತರ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel