ಬೆಂಗಳೂರು: ದೀಪದ ಹಬ್ಬ ದೀಪಾವಳಿಗೆ ಇನ್ನೇನು ಒಂದು ವಾರ ಮಾತ್ರ ಬಾಕಿ ಇದೆ. ಆದರೆ, ಈ ಬಾರಿಯ ಹಬ್ಬಗಳ ಸಂಭ್ರಮವನ್ನು ಹೆಮ್ಮಾರಿ ಕೊರೊನಾ ಕಿತ್ತುಕೊಂಡಿದೆ. ಇದರ ಜತೆಗೆ ಈ ಬಾರಿಯ ದೀಪಾಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಕೊರೊನಾ ಸೋಂಕಿತರು ಅದರಲ್ಲೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರ ಆರೋಗ್ಯದ ಮೇಲೆ ಪಟಾಕಿ ಶಬ್ಧ ಮತ್ತು ವಿಷಕಾರಿ ಹೊಗೆ ತೀವ್ರ ಪರಿಣಾಮ ಬೀರಲಿದೆ. ಇದರಿಂದ ಕೊರೊನಾ ಸಾವು-ನೋವು ಹೆಚ್ಚಳ ಆಗಬಹುದು. ಪಟಾಕಿ ಬ್ಯಾನ್ ಮಾಡುವುದು ಒಳಿತು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ತಜ್ಞರ ಸಲಹೆಗೆ ಮನ್ನಣೆ ನೀಡಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.
ದೀಪಾವಳಿ ಬೆಳಕಿನ ಹಬ್ಬ ಹೀಗಾಗಿ ದೀಪ ಬೆಳಗಿ, ಪಟಾಕಿ ಬೇಡ. ಬೇಕಿದ್ದರೆ ಮಾಲಿನ್ಯಕಾರಕವಲ್ಲದ ಹಸಿರು ಪಟಾಕಿ ಹಚ್ಚಿ ಎಂಬ ಸಂದೇಶವನ್ನು ಸಿಎಂ ಯಡಿಯೂರಪ್ಪ ರವಾನಿಸಿದ್ದಾರೆ.
ಹಸಿರು ಪಟಾಕಿ ಹಚ್ಚಲು ಗ್ರೀನ್ ಸಿಗ್ನಲ್
ದೀಪಾವಳಿ ಹಬ್ಬ ಅಂದರೆ, ಪಟಾಕಿ ಇಲ್ಲದೆ ಮಾಡಿದರೆ ಅದು ಹಬ್ಬವೇ ಅಲ್ಲ. ಬಾನೆತ್ತರಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸುವ ಮಜವೇ ಬೇರೆ. ಆದರೆ, ಈ ಬಾರಿ ಹೆಮ್ಮಾರಿ ಕೊರೊನಾ ವಕ್ಕರಿಸುವ ಕಾರಣ ಸಾಮಾನ್ಯ ಪಟಾಕಿ ಬದಲು ಹಸಿರು ಪಟಾಕಿ ಹಾರಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ದೀಪಾವಳಿ ಹಬ್ಬ ಅಂದ್ರೆ ಒಂದಿಟ್ಟು ಪಟಾಕಿ ಹಚ್ಚಲೇಬೇಕು. ಹೀಗಾಗಿ ಮಾಲಿನ್ಯಕಾರಕವಲ್ಲದ ಹಸಿರು ಪಟಾಕಿ ಹಚ್ಚಲು ಮಾತ್ರ ಅವಕಾಶ ನೀಡಲಾಗಿದೆ. ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಶಬ್ದವಲ್ಲದ, ಮಾಲಿನ್ಯವಲ್ಲದ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ.
ಕೊರೊನಾ ೨ನೇ ಅಲೆ ಅಪ್ಪಳಿಸೋದನ್ನು ತಡೆಯೋ ಸಲುವಾಗಿ ರಾಜ್ಯಾದ್ಯಂತ ಯಡಿಯೂರಪ್ಪ ಸರ್ಕಾರ ಪಟಾಕಿ ಬ್ಯಾನ್ ಮಾಡಿದೆ. ದೀಪಾವಳಿ ಹೊತ್ತಲ್ಲಿ ಪಟಾಕಿ ಮಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಯಾವುದೇ ಬಗೆಯ ಪಟಾಕಿಗಳನ್ನು ಮಾರಾಟ ಮಾಡುವುದಾಗಲಿ ಅಥವಾ ಹೊಡೆಯುವುದಾಗಲಿ ಮಾಡುವಂತಿಲ್ಲ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳಲಿದ್ದು, ಜಿಲ್ಲಾಡಳಿತಗಳಿಗೆ ಸುತ್ತೋಲೆ ರವಾನೆ ಆಗಲಿದೆ.
ಈಗಾಗಲೇ ದೆಹಲಿ, ಒಡಿಶಾ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧ ಮಾಡಲಾಗಿದೆ. ಈ ಸಾಲಿಗೆ ಕರ್ನಾಟಕವೂ ಇದೀಗ ಸೇರಿದೆ. ಪಟಾಕಿಯಿಂದ ಮಾಲಿನ್ಯ ಹೆಚ್ಚಾಗಲಿದೆ. ಜೊತೆಗೆ ಚಳಿಗಾಲವೂ ಇರುವುದರಿಂದ ಸೋಂಕು ಹೆಚ್ಚಳವಾಗಬಹುದು. ಉಸಿರಾಟ ಸಮಸ್ಯೆ ಇರುವ ಸೋಂಕಿತರ ಸ್ಥಿತಿ ಗಂಭೀರ ಆಗಬಹುದು. ಹೀಗಾಗಿ ಪಟಾಕಿ ನಿಷೇಧ ಉತ್ತಮ ನಿರ್ಧಾರ ಎನ್ನುತ್ತಾರೆ ವೈದ್ಯರು.
ಕದ್ದು ಪಟಾಕಿ ಸಿಡಿಸಿದ್ರೆ ಹುಷಾರ್..?
ರಾಜ್ಯದಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ. ಈ ಬಾರಿ ಸರಳ ದೀಪಾವಳಿ ಮಾಡಿ ಎಂದು ನಾಡಿನ ಜನರಿಗೆ ಕರೆ ನೀಡಿದ್ದಾರೆ. ಈ ವರ್ಷ ಯಾರೂ ಪಟಾಕಿ ಸಿಡಿಸದೆ ಅರ್ಥ ಪೂರ್ಣವಾಗಿ ಹಬ್ಬವನ್ನು ಆಚರಣೆ ಮಾಡಬೇಕಿದೆ. ಆರೋಗ್ಯದ ದೃಷ್ಟಿಯಿಂದ ಪಟಾಕಿ ನಿಷೇಧ ಮಾಡಲಾಗಿದೆ. ಜನರ ಸಂತೋಷವನ್ನು ದೂರ ಮಾಡಲು ನಾವು ಈ ಕ್ರಮಕೈಗೊಂಡಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಆರೋಗ್ಯ ಇಲಾಖೆಯ ತಾಂತ್ರಿಕ ಸಮಿತಿಯಿಂದ ನೀಡಿರುವ ವರದಿ ಅನ್ವಯ ದೀಪಾಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡಲಾಗಿದೆ. ಕದ್ದು ಮುಚ್ಚಿ ಪಟಾಕಿ ಸಿಡಿಸುವವರ ಮೇಲೂ ನಿಗಾ ವಹಿಸಲಾಗುವುದು. ಪಟಾಕಿ ಸಿಡಿಸುವುದನ್ನು ತಡೆಯಲು ನಿಯಮ ರೂಪಿಸುತ್ತೇವೆ. ಒಂದೆರಡು ದಿನಗಳಲ್ಲಿ ಪಟಾಕಿ ನಿಷೇಧದ ರೂಪುರೇಷೆಗಳನ್ನು ಅಂತಿಮಗೊಳಿಸುತ್ತೇವೆ. ಜನರು ಕೂಡ ಪಟಾಕಿ ನಿಷೇಧಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಟಾಕಿ ಮಾರಾಟಗಾರರು ಕಂಗಾಲು
ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಅನುಮತಿ ಪಡೆದು, ಜಾಗಕ್ಕೆ ಬಾಡಿಗೆ ನೀಡಿ ಪಟಾಕಿ ಮಾರಾಟ ಮಾಡಲು ಮಳಿಗೆಗಳು ತೆರೆದಿರುವ ಮಾರಾಟಗಾರರು ರಾಜ್ಯ ಸರ್ಕಾರದ ನಿರ್ಧಾರದಿಂದ ಕಂಗಾಲಾಗಿದ್ದಾರೆ.
ಹಬ್ಬಕೆAದು ಲಕ್ಷಾಂತರ ರೂ. ದುಡ್ಡು ಹಾಕಿ ಖರೀದಿ ಮಾಡಿದ್ದೇವೆ. ಮಳಿಗೆಗಳನ್ನು ಪಡೆಯಲು ಮಂಗಡ ಹಣ ಕೊಟ್ಟು ಅಂಗಡಿ ತೆರೆದೂ ಆಗಿದೆ. ಇಂತಹ ಸಂದರ್ಭದಲ್ಲಿ ಈಗ ಪಟಾಕಿ ಮಾರಾಟಕ್ಕೆ ಸರ್ಕಾರ ನಿಷೇಧ ಹೇರಿರುವುದು ನಮ್ಮ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂದು ಆಸಮಾಧಾನ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel