ಬೆಂಗಳೂರು: ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯದ ಕಾರಣಕ್ಕೆ ದೇವಸ್ಥಾನಕ್ಕೆ ಮುಜರಾಯಿ ವ್ಯಾಪ್ತಿಗೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈಡಿಗ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.
ಸಾಗರ ಶಾಸಕ ಹರತಾಳು ಹಾಲಪ್ಪ ನೇತೃತ್ವದ ಈಡಿಗ ಸಮುದಾಯದ ನಿಯೋಗಕ್ಕೆ ಯಡಿಯೂರಪ್ಪ ಅವರು ಈ ಅಭಯ ನೀಡಿದ್ದಾರೆ.
ಸಿಂಗದೂರು ಚೌಡೇಶ್ವರಿ ದೇವಾಲಯದ ಆಡಳಿತ ಮಂಡಳಿ ನಡುವೆ ನಡೆಯುತ್ತಿರುವ ತಿಕ್ಕಾಟ ವಿಚಾರವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಜತೆ ಈಡಿಗರ ಸಮುದಾಯದ ನಿಯೋಗ ಚರ್ಚೆ ನಡೆಸಿತು.
ದೇವಾಲಯದ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ಹಾಗೂ ಭಕ್ತರು ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ದೇವಾಲಯದ ಧರ್ಮದರ್ಶಿ ರಾಮಪ್ಪ ಹಾಗೂ ಅರ್ಚಕ ಶೇಷಗಿರಿ ಭಟ್ ನಡುವೆ ಪೂಜೆ ವಿಚಾರದಲ್ಲಿ ಗಲಾಟೆ ನಡೆದು ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸೂಚನೆ ನೀಡಿತ್ತು. ಇದರ ಬೆನ್ನಲೇ ಅರ್ಚಕ ಶೇಷಗಿರಿ ಭಟ್ ಹಾಗೂ ಧರ್ಮದರ್ಶಿ ರಾಮಪ್ಪ ಅವರ ಪುತ್ರನ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ವಿವಾದ ಬಗೆಹರಿಸಲು ಸಲಹಾ ಸಮಿತಿ ರಚಿಸಿದ್ದರು. ಜತೆಗೆ ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರಲು ಚಿಂತನೆ ನಡೆಯುತ್ತಿತ್ತು.
ಸಿಂಗದೂರು ಚೌಡೇಶ್ವರಿ ದೇವಾಲಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ರಚನೆ ಮಾಡಿರುವ ಸಲಹಾ ಸಮಿತಿ ಮಾರ್ಪಾಡಿಗೆ ನಿಯೋಗ ಮನವಿ ಮಾಡಿದೆ. ಈ ಹಿಂದೆ ದೇವಾಲಯ ನಡೆಯುತ್ತಿದ್ದ ರೀತಿಯಲ್ಲೇ ಇನ್ನು ಮುಂದೆಯೂ ಮುನ್ನಡೆಸಿಕೊಂಡು ಹೋಗಲು ಅನುವು ಮಾಡಿಕೊಡಿ ಎಂದು ನಿಯೋಗ ಸಿಎಂಗೆ ಮನವಿ ಮಾಡಿತು.
ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಬಿಎಸ್‍ವೈ, ಸಿಗಂದೂರು ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದ್ದಾರೆ.
ಜಿಲ್ಲಾಡಳಿತ ನೇತೃತ್ವದ ಸಲಹಾ ಸಮಿತಿಗೆ ಈಡಿಗ ಸಮುದಾಯದ ರೇಣುಕಾನಂದ ಸ್ವಾಮೀಜಿ ಸೇರ್ಪಡೆ ಮಾಡಿಕೊಳ್ಳಲು ಸಿಎಂ ಸೂಚಿಸಿದ್ದಾರೆ. ಇವರ ಸಲಹೆ, ಮಾರ್ಗದರ್ಶನವನ್ನು ತೆಗೆದುಕೊಂಡು ಸಮಿತಿ ಕಾರ್ಯ ನಿರ್ವಹಿಸಲಿದೆ. ಈಗ ರಚನೆಯಾಗಿರುವ ಸಮಿತಿ ನಾಲ್ಕು ತಿಂಗಳವರೆಗೆ ಮುಂದುವರೆಯಲಿದೆ. ಬಳಿಕ ಸಮಿತಿ ಇರಬೇಕೋ ಅಥವಾ ಕೈ ಬಿಡಬೇಕೋ ಎಂಬ ಕುರಿತು ನಿರ್ಧರಿಸಲಾಗುತ್ತದೆ ಎಂದು ಸಭೆಯಲ್ಲಿ ಸಿಎಂ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel