ಬೆಂಗಳೂರು : ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಸಂಪಾದಕ ಹಾಗೂ ಲಕ್ಷಾಂತರ ಅಭಿಮಾನಿಗಳು ಹಾಗೂ ಓದುಗರ ನೆಚ್ಚಿನ ಬರಹಗಾರ ರವಿ ಬೆಳಗೆರೆ ವಿಧಿವಶರಾಗಿದ್ದಾರೆ.
ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದ ರವಿಬೆಳಗೆರೆ, ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಗುರುವಾರ ತಡರಾತ್ರಿ ಹಾಯ್ ಬೆಂಗಳೂರ್ ಪತ್ರಿಕೆ ಕಚೇರಿಯಲ್ಲೇ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
1958 ಮಾರ್ಚ್15 ರಂದು ಬಳ್ಳಾರಿಯಲ್ಲಿ ಜನಿಸಿದ ಬೆಳಗೆರೆ, ಪತ್ರಿಕಾರಂಗದ ಹಲವು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಬಳ್ಳಾರಿಯಲ್ಲೇ ಶಿಕ್ಷಣ ಮುಗಿಸಿದ್ದ ರವಿಬೆಳಗೆರೆ, ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಆರಂಭ ಮಾಡಿದ್ರು.
1995ರಲ್ಲಿ ಹಾಯ್ ಬೆಂಗಳೂರು ವಾರ ಪತ್ರಿಕೆ ಪ್ರಾರಂಭ ಮಾಡಿದ ರವಿಬೆಳಗೆರೆ ಹಿಂದುರುಗಿ ನೋಡಲೇ ಇಲ್ಲ. ಕ್ರೈಂ ಡೈರಿ ಕಾರ್ಯಕಮದ ನಿರೂಪಕರಾಗಿದ್ದ ರವಿ ಬೆಳಗೆರೆ ದೊಡ್ಡ ಹೆಸರು ಸಂಪಾದಿಸಿದ್ದರು. ಯುವ ಮನಸುಗಳಿಗಾಗಿ ಅವರು ಆರಂಭಿಸಿದ್ದ `ಓ ಮನಸೇ’ ಪಾಕ್ಷಿಕ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇನ್ನು ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ರವಿಬೆಳಗೆರೆ, ಭಾವನ ಆಡಿಯೋ, ಭಾವನ ಪ್ರಕಾಶನ, ಪ್ರಾರ್ಥನಾ ಶಾಲೆಯ ಸಂಸ್ಥಾಪಕರು ಕೂಡ ಹೌದು. ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿಯೂ ಅಭಿನಿಯಿಸಿದ್ದ ರವಿ ಬೆಳಗೆರೆ ಅವರ ನಿರೂಪಣಾ ಶೈಲಿಯೇ ಮ್ಯಾಜಿಕ್ ಮಾಡಿತ್ತು.
ರವಿ ಬೆಳೆಗೆರೆ ಅವರು ಅಪರಾಧ ಜಗತ್ತಿನ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಸರ್ಪ ಸಂಬಂಧ, ಭೀಮಾತೀರದ ಹಂತಕರು, ನೀ ಹಿಂಗ ನೋಡಬೇಡ ನನ್ನ, ಡಿ ಕಂಪನಿ, ಹಿಮಾಲಯನ್ ಬ್ಲಂಡರ್, ವಿನೋದ ಲೀಲಾ ಸೇರಿದಂತೆ ಹಲವು ಕೃತಿಗಳು ಬೆಳಗೆರೆ ಕೊಡುಗೆಗಳಾಗಿವೆ.