ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಐಪಿಎಲ್ ನ ಎಂಟು ಫ್ರಾಂಚೈಸಿಗಳ ಜೊತೆ ಇಂದು ನಿಗದಿಪಡಿಸಿದ್ದ ವಿಡಿಯೋ ಸಂವಾದವನ್ನು ರದ್ದುಗೊಳಿಸಿದೆ. ಈ ಮೂಲಕ ಐಪಿಎಲ್ ಟೂರ್ನಿ ಆರಂಭಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಬಿಸಿಸಿಐ ಇಂದು ಫ್ರಾಂಚೈಸಿಗಳ ಜೊತೆ ವಿಡಿಯೋ ಸಂವಾದ ನಡೆಸಲು ಮುಂದಾಗಿತ್ತು. ಆದ್ರೆ ಇದೀಗ ವಿಡಿಯೋ ಕಾನ್ಫರೆನ್ಸ್ ರದ್ದಾಗಿದೆ.
ದೇಶದಲ್ಲಿ ಕೊರೊನಾಸುರನ ಅಬ್ಬರ ಜೋರಾಗಿದ್ದು, ದೇಶದಲ್ಲಿ ಸುಮಾರು 500 ಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂತಹ ಕಠಿಣ ಸಂದರ್ಭದಲ್ಲಿ ಐಪಿಎಲ್ ಕುರಿತಾದ ಸಭೆ ನಡೆಸುವುದು ಸೂಕ್ತ ಅಲ್ಲ. ಹೀಗಾಗಿ ಫ್ರಾಂಚೈಸಿಗಳ ಜೊತೆಗಿನ ಕಾನ್ಫರೆನ್ಸ್ ಕಾಲ್ ಅನ್ನು ರದ್ದು ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
2020 ಐಪಿಎಲ್ ಏಪ್ರಿಲ್ 15ಕ್ಕೆ ಐಪಿಎಲ್ ಆರಂಭವಾಗುವುದಿಲ್ಲ ಎಂಬ ವಿಚಾರ ಖಚಿತವಾಗಿದ್ದು, ಸದ್ಯ ಮೇ ತಿಂಗಳಲ್ಲೂ ಟೂರ್ನಿ ನಡೆಯುವುದು ಬಹುತೇಕ ಅನುಮಾನವೆನಿಸಿದೆ.








