ಹಾಸನ; ಹಾಸನ ನಗರದ ಅಧಿದೇವತೆ ಹಾಸನಾಂಬ ದೇವಿ ದೇವಾಲಯದ ಬಾಗಿಲು ತೆರೆದು 11 ದಿನಗಳ ಬಳಿಕ ಮುಚ್ಚಲಾಗಿದೆ(doors closed). ದೇವಾಲಯದ ಬಾಗಿಲು ಮತ್ತೆ ತೆರೆಯುವುದು ಮುಂದಿನ ವರ್ಷದ ದಸರಾ ಹಬ್ಬದ ನಂತರ. ಹಾಸನಾಂಬ ದೇವಿಯ ದರ್ಶನ ಮಾಡಬೇಕಾದರೆ ಒಂದು ವರ್ಷ ಕಾಯಲೇಬೇಕು.
ಸೋಮವಾರ ಮಧ್ಯಾಹ್ನ 1 ಗಂಟೆ 30 ನಿಮಿಷಕ್ಕೆ ಸರಿಯಾಗಿ ಪೂಜಾ ಕೈಂಕರ್ಯಗಳ ಬಳಿಕ ಶಾಸ್ತ್ರೋಕ್ತವಾಗಿ ನಡೆದ ದೇವಾಲಯದ ಬಾಗಿಲು ಮುಚ್ಚಿ, ಬೀಗ ಮುದ್ರೆ ಹಾಕಲಾಯಿತು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲಾಧಿಕಾರಿ ಮತ್ತು ದೇವಾಲಯದ ಪ್ರಮುಖರ ಸಮ್ಮುಖದಲ್ಲಿ ದೇವಾಲಯ ಬಂದ್ ಮಾಡಲಾಯಿತು.
ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಸನಾಂಬ ದೇವಿಯ ದರ್ಶನ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಮತ್ತು ಕೊನೆ ದಿನ ಸೋಮಚಾರ ಎರಡು ದಿನಗಳ ಕಾಲ ಮಾತ್ರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ನವೆಂಬರ್ 5 ರ ಮಧ್ಯಾಹ್ನ 12 ಗಂಟೆ 45 ನಿಮಿಷಕ್ಕೆ ಸರಿಯಾಗಿ ದೇವಾಲಯದ ಬಾಗಿಲು ತೆರೆಯಲಾಗಿತ್ತು. 11 ದಿನ ಪೂಜೆಯ ಬಳಿಕ ಸೋಮವಾರ ಮಧ್ಯಾಹ್ನ 1 ಗಂಟೆ 30 ನಿಮಿಷಕ್ಕೆ ದೇವಾಲಯದ ಗರ್ಭಗುಡಿಗೆ ಬೀಗ ಹಾಕಿ ಮುದ್ರೆ ಹಾಕಲಾಯಿತು. ಇದಕ್ಕೂ ಮುನ್ನ ಅರ್ಚಕರು ದೇವಿಗೆ ನೈವೇದ್ಯ ಮತ್ತು ವಿವಿಧ ಪೂಜಾ ಕೈಂಕಯಗಳನ್ನು ನೆರವೇರಿಸಿದರು. ವಿಶ್ವರೂಪ ದರ್ಶನ ನೀಡಿದ ಬಳಿಕ ಮಾತೆ ಹಾಸನಾಂಬ ದೇವಾಲಯವನ್ನು ಮುಚ್ಚಲಾಗಿದೆ. ಇಂದೂ ಕೂಡ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಕಾತರರಾಗಿದ್ದರು. ಉಸ್ತುವಾರಿ ಸಚಿವರ ಸೂಚನೆಯಂತೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚುವ ಮುನ್ನ ಅರ್ಚಕರು ದೇವಿಯನ್ನು ನೆನೆದು ಪ್ರಾರ್ಥನೆ ಮಾಡಿದರು. ದೇವಾಲಯದಲ್ಲಿ ದೀಪ ಹಚ್ಚಿ, ದೇವಿಗೆ ಅನ್ನವನ್ನು ಎಡೆ ಇಟ್ಟು ಹೂವನ್ನು ಹಾಕಿದರು. ದೇವಾಲಯದ ಬಾಗಿಲು ಹಾಕಿದ ನಂತರ ದೇವಿಯ ಒಡವೆಯನ್ನು ಅರ್ಚಕರು ತಮ್ಮ ತಲೆಯ ಮೇಲೆ ಹೊತ್ತುಕೊಂಡು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.
ಈ ದೇವಾಲಯದ ವಿಶೇಷ ಅಂದರೆ ಈ ವರ್ಷ ಎಡೆ ಇಟ್ಟ ಅನ್ನ ಹಾಗೂ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ದೀಪ ಉರಿಯುತ್ತಿರುತ್ತದೆ ಮತ್ತು ಅನ್ನ ಹಳಸಿರುವುದಿಲ್ಲ. ದೇವಿಯ ಈ ವಿಶೇಷದಿಂದಲೇ ಈ ದೇವಾಲಯ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಹಾಗಾಗಿಯೇ ಪ್ರತಿವರ್ಷ ಹಾಸನಾಂಬ ದೇವಿ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ದೇವಿಯನ್ನು ಪೂಜಿಸಿ ಪ್ರಾರ್ಥನೆ ಮಾಡಿ ದೇವಾಲಯದ ಗರ್ಭಗುಡಿಯಲ್ಲಿ ದೀಪವನ್ನು ಹಚ್ಚಲಾಗಿದೆ. ಈ ವರ್ಷ ಹಚ್ಚಿದ ದೀಪ ಮುಂದಿನ ವರ್ಷದವರೆಗೆ ಉರಿಯುತ್ತಿರುತ್ತದೆ ಅನ್ನೋ ನಂಬಿಕೆಯಿದೆ. ಮುಂದಿನ ವರ್ಷ 2021ಕ್ಕೆ ದೇವಾಲಯದ ಬಾಗಿಲು ತೆರೆಯಲಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಮುಂದಿನ ಕೆಲ ದಿನಗಳಲ್ಲಿ ಪಂಚಾಂಗದ ಪ್ರಕಾರ ಜ್ಯೋತಿಷಿಗಳ ಮಾಹಿತಿ ಪಡೆದು ಮುಂದಿನ ವರ್ಷದ ಜಾತ್ರಾ ಮಹೋತ್ಸವದ ದಿನಾಂಕವನ್ನು ಜಿಲ್ಲಾಡಳಿತ ಪ್ರಕಟಿಸಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel