ಬಳ್ಳಾರಿ: ಮುಖ್ಯಮಂತ್ರಿಗಳನ್ನಾಗಲೀ, ಪಕ್ಷದ ವರಿಷ್ಠರನ್ನಾಗಲಿ ಶಾಸಕರು ಭೇಟಿ ಮಾಡಿದ ತಕ್ಷಣ ಅವರೆಲ್ಲ ಮಂತ್ರಿಗಿರಿಗಾಗಿಯೇ ಹೋಗಿದ್ದಾರೆ ಎನ್ನುವ ಕಲ್ಪನೆ ತಪ್ಪು. ಶುಭಾಶಯ ಕೋರಲೋ ಅಥವಾ ಕ್ಷೇತ್ರದ ಕೆಲಸಕ್ಕಾಗಿಯೋ ಭೇಟಿ ಮಾಡುವುದು ಸಹಜವೇ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಯುವಜನ ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿದ ಹದಿನೇಳು ಜನರನ್ನು ಬಹಳ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಅದರಂತೆ ಎಲ್ಲಾ ಶಾಸಕರು ಸಚಿವರನ್ನೂ ಸಹ ಗೌರವದಿಂದಲೇ ಕಾಣುತ್ತಿದ್ದಾರೆ. ಯಾರು ಯಾರಿಗೆ ಏನು ಸ್ಥಾನಮಾನ ಗೌರವ ಕೊಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಚೆನ್ನಾಗಿ ಗೊತ್ತಿದೆ. ನಮ್ಮಗಳಲ್ಲಿ ಯಾರಿಗೂ ಅಸಮಾಧಾನವಿಲ್ಲ. ಎಲ್ಲರೂ ಸಹೋದರರಂತಿದ್ದೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್-ಜೆಡಿಎಸ್‍ನಿಂದ ವಲಸೆ ಬಂದ ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ, ಎಂಟಿಬಿ ನಾಗರಾಜ್, ಆರ್. ಶಂಕರ್, ವಿಶ್ವನಾಥ್‍ಗೆ ಸಚಿವ ಸ್ಥಾನ ನೀಡಲು ಸಿಎಂ ಯಡಿಯೂರಪ್ಪ ತೀವ್ರ ಕಸರತ್ತು ನಡೆಸಿದ್ದಾರೆ. ಆದರೆ, ಹೈಕಮಾಂಡ್‍ನಿಂದ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ದೊರೆಯದೇ ಇರುವುದು ಹಲವು ಶಾಸಕರನ್ನು ಕಂಗಾಲು ಮಾಡಿದೆ.
ಜತೆಗೆ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಮುನಿರತ್ನ ನಡುವೆ ಮುನಿಸು ಏರ್ಪಟ್ಟಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ ಪಾಟೀಲ್, ನಾವೆಲ್ಲ ಒಟ್ಟಿಗೆ, ಸೋದರರಂತೆ ಇದ್ದೇವೆ ಎಂದಿರುವುದು ಮುಂದಿನ ದಿನಗಳಲ್ಲಿ ಯಾವ ಸ್ವರೂಪಲ್ಲೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel