ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಸಾರ್ವಜನಿಕರು ಅಗತ್ಯ ವಸ್ತುಗಳಿಗೆ ಗುಂಪು ಗುಂಪಾಗಿ ಮಾರುಕಟ್ಟೆಗಳಿಗೆ ಮುಗಿ ಬೀಳುತ್ತಿರುವ ಹಿನ್ನೆಲೆಯಿಂದ ನಾಳೆಯಿಂದ ಎಲ್ಲವೂ ಬಂದ್, ಅಗತ್ಯ ಸಾಮಾಗ್ರಿಗಳನ್ನು ನೇರ ಮನೆಗೆ ತಲುಪಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕಡಕ್ ಆದೇಶ ನೀಡಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಕಟ್ಟು ನಿಟ್ಟಿನ ಕ್ರಮದ ಅನಿವಾರ್ಯ ಇದೆ. ಲಾಕ್ ಡೌನ್ ಆದೇಶ ಜಾರಿಯಲ್ಲಿ ಇದ್ದರೂ ಜನರು ಅಗತ್ಯ ವಸ್ತುಗಳಿಗಾಗಿ ಗುಂಪು ಗುಂಪುಗಳಾಗಿ ಮಾರುಕಟ್ಟೆಗಳಿಗೆ ಮುಗಿಬೀಳುತ್ತಿರುವ ಬಗ್ಗೆ ನನಗೆ ತಿಳಿದುಬಂದಿದೆ. ಹಾಗಾಗಿ ನಾಳೆಯಿಂದ ನಗರದಲ್ಲಿ ಇದಕ್ಕೆ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಜನರು ಹೊರಗೆ ಬರುವಂತಿಲ್ಲ. ಜನರಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಮಾತ್ರ ನಿಯಂತ್ರಿಸಬಹುದು, ಆದರೆ ಜನರು ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗಳಲ್ಲಿ ಮುಗಿಬೀಳುತ್ತಿದ್ದಾರೆ. ಅಲ್ಲದೆ ವರ್ತಕರು ಗ್ರಾಹಕರಿಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ವ್ಯಾಪಾರ ವಹಿವಾಟು ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ. ಹೀಗಾಗಿ ನಾಳೆ ಎಲ್ಲವನ್ನು ಬಂದ್ ಮಾಡಲಾಗುವುದು. ಜನರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಾವೇ ಮನೆಗೆ ತಲುಪಿಸಲು ಶೀಘ್ರವೇ ವ್ಯವಸ್ಥೆ ಮಾಡುತ್ತೇವೆ. ಸರ್ಕಾರದ ಕಡೆಯಿಂದ ಪ್ರತಿ ಮನೆಗೆ ಹೇಗೆ ತಲುಪಿಸೋದು, ಅಪಾರ್ಟ್ ಮೆಂಟ್ ಗಳಿಗೆ ಹೇಗೆ ತಲುಪಿಸೋದು ಎನ್ನುವ ಬಗ್ಗೆ ಈಗಾಗಲೇ ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸ್ಪಷಪಡಿಸಿದ್ದಾರೆ.