ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಆಪ್ ಮೂಲಕ ಬೆಳೆ ಸಮೀಕ್ಷೆ ಯೋಜನೆಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ.
ದೇಶದಲ್ಲೇ ಮೊದಲ ಬಾರಿಗೆ ರೈತರಿಗೆ ಸಹಕಾರಿಯಾಗಲೆಂದು ಬೆಳೆ ಸಮೀಕ್ಷೆಯನ್ನು ಆಪ್ ಮೂಲಕ, ರೈತನಿಗೆ ತನ್ನ ಹೊಲಕ್ಕೆ ತಾನೇ ಸರ್ಟಿಫಿಕೇಟ್ ಕೊಡುವ ಸ್ವಾತಂತ್ರ್ಯವನ್ನು ನೀಡಲಾಯಿತು. ರಾಜ್ಯ ಸರ್ಕಾರದ ವಿನೂತನ ಪ್ರಯತ್ನಕ್ಕೆ ರಾಜ್ಯಾದ್ಯಂತ ರೈತರಿಂದ ನಿರೀಕ್ಷೆಗೂ ಮೀರಿದ ಬೆಂಬಲ ದೊರೆಯುವುದರೊಂದಿಗೆ “ಬೆಳೆ ಸಮೀಕ್ಷೆ ಉತ್ಸವ” ಕಾರ್ಯಕ್ರಮ ಯಶ ಕಂಡಿತು.

ಬೆಳೆ ಸಮೀಕ್ಷೆ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರಶಂಸೆ ವ್ಯಕ್ತಪಡಿಸಿ ರಾಜ್ಯದ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.
ಮೊಬೈಲ್ ಆಪ್ ಮೂಲಕ ನಡೆಸಿದ ಬೆಳೆ ಸಮೀಕ್ಷೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆ ಅತ್ಯಂತ ಹೆಚ್ಚು ಸಹಕಾರಿಯಾಗಿದ್ದು, ಕರ್ನಾಟಕ ರಾಜ್ಯದ ಸಮಸ್ತ ರೈತ ಬಾಂಧವರ ಪರವಾಗಿ ಪ್ರಧಾನಿ ಅವರಿಗೆ ಮನಃಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಬಿ.ಸಿ ಪಾಟೀಲ್ ಹೇಳಿದ್ದಾರೆ.

ನನ್ನ ಬೆನ್ನಿಗೆ ನಿಂತು ಸಹಕಾರ ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ನನ್ನ ಕೃತಜ್ಞತೆಗಳು. “ಬೆಳೆ ಸಮೀಕ್ಷೆ ಉತ್ಸವ” ಕಾರ್ಯಕ್ಕೆ ಪ್ರಾರಂಭದಿಂದ ಕೊನೆಯವರೆಗೆ ಅತ್ಯಂತ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದ ಕೃಷಿ ಇಲಾಖೆಯ ಅಧಿಕಾರಿಗಳು, ಸಹಕಾರ ನೀಡಿದ ತೋಟಗಾರಿಕೆ, ರೇಷ್ಮೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದಗಳು. ಅಲ್ಲದೇ, ಈ ವಿಶೇಷ ಪ್ರಯತ್ನಕ್ಕೆ ಬೆಂಬಲಿಸಿದ ಸರ್ಕಾರದ ಸರ್ವ ಆಡಳಿತ ವರ್ಗದವರಿಗೂ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.

ಮುಂಗಾರು ಬೆಳೆಗೆ ನಡೆಸಿದ ಬೆಳೆ ಸಮೀಕ್ಷೆ ಯಶಸ್ವಿಯಾದ ಬೆನ್ನಲ್ಲೇ, ಹಿಂಗಾರು ಬೆಳೆಗೂ ನಡೆಸುವ ಉದ್ದೇಶವಿದ್ದು ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ನಮಗೆ ಇದೆ. ಈ ಮೂಲಕ ಕೇಂದ್ರ ಕೃಷಿ ಸಚಿವರಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತೇನೆ.

ಅನ್ನ ನೀಡುವ ರೈತ ಸಶಕ್ತನಾದರೆ ಮಾತ್ರವೇ ಸಮರ್ಥ ಹಾಗೂ ಸಶಕ್ತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. “ಅನ್ನದಾತೋ ಸುಖೀಭವ” ಅನ್ನುವ ಮಾತು ಕೇವಲ ಮಾತಾಗಿ ಉಳಿಯಬಾರದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳು ನೇರವಾಗಿ ರೈತನಿಗೆ ಸಕಾಲದಲ್ಲಿ ತಲುಪಬೇಕು. ಆಗಲೇ ರೈತರಿಗೆ ಸರಿಯಾದ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








