ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇಂದು ಬೆಳಗ್ಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯಿತು.
ಪ್ರಧಾನಿ ಮೋದಿ ಮಂಗಳವಾರ ದೇಶವನ್ನು ಉದ್ದೇಶಿಸಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಾಮಾಜಿಕ ಆಂತರ ಕಾಯ್ದುಕೊಳ್ಳಿ. 21 ದಿನಗಳ ಕಾಲ ಯಾರೂ ಮನೆಯಿಂದ ಹೊರಗೆ ಬರಬೇಡಿ. ಕೋವಿಡ್-19 ತಡೆಗೆ ಸಾಮಾಜಿಕ ಅಂತರ ಮುಖ್ಯ. ಈ ಮಾರಕ ವೈರಾಣು ಹೇಗೆ ಹರಡುತ್ತದೆ ಎಂದು ಇಲ್ಲಿಯವರೆಗೂ ಸ್ಪಷ್ಟತೆ ಸಿಕ್ಕಿಲ್ಲ. ಇದರ ಪ್ರಾಥಮಿಕ ಗುಣಲಕ್ಷಣಗಳು ಏನು ಎಂಬುದು ಯಾರಿಗೂ ಅರ್ಥ ಆಗಿಲ್ಲ. ಸಾಮಾಜಿಕ ಅಂತರವೂ ನನಗೂ ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಮನವಿ ಮಾಡಿದ್ದರು. ಭಾಷಣದಲ್ಲಿ ಹೇಳಿದಂತೆ ಪ್ರಧಾನಿ ಮೋದಿ ಇಂದು ಸಾಮಾಜಿಕ ಅಂತರ ಕಾಯ್ದುಕೊಂಡು ಕ್ಯಾಬಿನೆಟ್ ಸಭೆ ನಡೆಸಿದರು.
ಮೂಲಗಳ ಪ್ರಕಾರ ಮೋದಿ ಸಚಿವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಲು ಮುಂದಾಗಿದ್ದರು. ನಂತರ ದೂರ ದೂರ ಕುರ್ಚಿಗಳನ್ನು ಇರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ನಡೆಸಿದರು ಎಂದು ಹೇಳಲಾಗಿದೆ.
ಭಾರತದಲ್ಲಿ ಇಲ್ಲಿಯವರೆಗೆ 530 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 11 ಮಂದಿ ಮೃತಪಟ್ಟಿದ್ದಾರೆ.








