ಬೆಂಗಳೂರು: ಲವ್ ಜೆಹಾದ್, ಗೋಹತ್ಯೆ ನಿಷೇಧದ ಮಾತುಗಳೆಲ್ಲ ಆಡಳಿತ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನ. ಅವರಿಗೆ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಇದಕ್ಕಾಗಿ ಕೋಮುದ್ವೇಷ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೋಹತ್ಯೆ ಬಗ್ಗೆ ಬಿಜೆಪಿ ನಾಯಕರದ್ದು ದಂದ್ವ ನಿಲುವು. ಪ್ರಧಾನಿ ನರೇಂದ್ರಮೋದಿ ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತು ಹಲವು ಪಟ್ಟು ಹೆಚ್ಚಾಗಿದೆ. ಅತೀ ಹೆಚ್ಚು ಗೋಮಾಂಸ ರಫ್ತು ನಡೆಯುತ್ತಿರುವುದು ಉತ್ತರಪ್ರದೇಶದಲ್ಲಿ, ಆ ವ್ಯವಹಾರದಲ್ಲಿ ತೊಡಗಿರುವ ಅನೇಕ ವ್ಯಾಪಾರಿಗಳು ಕೂಡಾ ಬಿಜೆಪಿಯವರು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ. ಹಿಂದಿನ ಬಿಜೆಪಿ ಸರ್ಕಾರ 1964ರ ಗೋಹತ್ಯೆ ನಿಷೇಧ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ನಮ್ಮ ಸರ್ಕಾರ ರದ್ದುಗೊಳಿಸಿ ಮೂಲ ಕಾಯ್ದೆಯನ್ನು ಉಳಿಸಿಕೊಂಡಿದೆ. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಆಡಳಿತ ವೈಫಲ್ಯ ಮರೆಮಾಚುವ ಯತ್ನ
ಈ ಲವ್ ಜೆಹಾದ್, ಗೋಹತ್ಯೆ ನಿಷೇಧದ ಮಾತುಗಳೆಲ್ಲ ತಮ್ಮ ಆಡಳಿತ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನ. ಅವರಿಗೆ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಇದಕ್ಕಾಗಿ ಕೋಮುದ್ವೇಷ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮದುವೆಗೆ ಜಾತಿ-ಧರ್ಮಗಳ ನಿಬರ್ಂಧ ಕಾನೂನಿನಲ್ಲಿ ಇಲ್ಲ. ದೇಶದ ಯಾವ ಕಾನೂನು ಕೂಡಾ ಲವ್ ಜೆಹಾದ್ ಎಂದರೆ ಏನು ಎಂದು ವ್ಯಾಖ್ಯಾನಿಸಿಲ್ಲ ಎಂದು ಕೇಂದ್ರ ಗೃಹಸಚಿವರೇ ಸಂಸತ್ ನಲ್ಲಿ ಹೇಳಿದ್ದಾರೆ. ಸಿ.ಟಿ ರವಿ ಗೃಹಸಚಿವರನ್ನು ಕೇಳಿಕೊಂಡು ಬಂದು ಮಾತನಾಡಲಿ. ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಂತರಧರ್ಮೀಯ ಮದುವೆ ಅಕ್ರಮ ಎಂದು ಹೇಳಿಲ್ಲ. ಆ ತೀರ್ಪನ್ನು ಉಲ್ಲೇಖಿಸುವವರು ಮೊದಲು ಅದನ್ನು ಓದಿಕೊಳ್ಳಲಿ. ಗೂಂಡಾ ರಾಜ್ಯವಾದ ಉತ್ತರಪ್ರದೇಶ ನಮಗೆ ಮಾದರಿ ಅಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಆರ್‍ಎಸ್‍ಎಸ್‍ನಿಂದ ನಾನು ಕಲಿಯಬೇಕಾಗಿಲ್ಲ
ಆರ್.ಎಸ್.ಎಸ್ ಶಾಖೆಗೆ ಹೋಗಿ ನಾನು ಕಲಿಯಬೇಕಾಗಿಲ್ಲ, ಅದರ ಬಗ್ಗೆ ತಿಳಿದುಕೊಂಡೇ ವಿರೋಧಿಸುತ್ತಿದ್ದೇನೆ. ಆಡಳಿತ ನಡೆಸುವವರಿಗೆ ಸಂವಿಧಾನ ಗೊತ್ತಿರಬೇಕು, ಆರ್‍ಎಸ್‍ಎಸ್ ಅಲ್ಲ. ಬಿಜೆಪಿ ನಾಯಕರು ಮೊದಲು ಸಂವಿಧಾನವನ್ನು ಓದಲಿ. ಬೇಕಾದರೆ ನಾನೇ ಸಂವಿಧಾನದ ಪಾಠ ಮಾಡ್ತೇನೆ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಮತ್ತು ಆರ್‍ಎಸ್‍ಎಸ್ ಮೂಲಭೂತವಾಗಿ ಸಂವಿಧಾನ ವಿರೋಧಿ. ಅದು ಮೀಸಲಾತಿ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎಲ್ಲವನ್ನೂ ವಿರೋಧಿಸುತ್ತದೆ. ಅವರು ಮಿಲ್ಲರ್ ವರದಿಯಿಂದ ಮಂಡಲ್ ವರದಿವರಗೆ ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರು ಎಂದು ಟೀಕಿಸಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ವಿರೋಧಿಸಿ ಕನ್ನಡ ಸಂಘಟನೆಗಳು ಡಿಸೆಂಬರ್ ಐದರಂದು ನಡೆಸಲಿರುವ ಕರ್ನಾಟಕ ಬಂದ್ ನಲ್ಲಿ ಪಾಲ್ಗೊಳ್ಳುವ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ. ಬಿಜೆಪಿ ಉಪಚುನಾವಣೆಯಲ್ಲಿ ಮರಾಠರನ್ನು ಓಲೈಸಲು ಇಂತಹ ಕ್ಷುಲಕ ರಾಜಕೀಯ ನಡೆಸುತ್ತಿದೆ.
ಬೆಳಗಾವಿ ಕರ್ನಾಟಕದ ಅಖಂಡ ಭಾಗ, ಇದನ್ನು ಮಹಾಜನ ವರದಿಯೇ ಸ್ಪಷ್ಟಪಡಿಸಿದೆ, ನೆಲ-ಜಲ-ಭಾಷೆಯ ರಕ್ಷಣೆ ಬಗ್ಗೆ ನಾವು ಬದ್ಧರಾಗಿದ್ದೇವೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ಖಂಡನೀಯ ಎಂದರು.
ಬಸನಗೌಡ ತುರ್ವಿಹಾಳ್ ನಾಳೆ ಕಾಂಗ್ರೆಸ್ ಸೇರ್ಪಡೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ತುರ್ವಿಹಾಳ್ ನಾಳೆ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ಉಪಚುನಾವಣೆಯಲ್ಲಿ ಅವರೇ ನಮ್ಮ ಅಭ್ಯರ್ಥಿಯಾಗಬಹುದು. ನಾವು ನಾಳೆ ಮಸ್ಕಿಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು-ಕಾರ್ಯಕರ್ತರ ಸಮಾಲೋಚನೆ ನಡೆಸಿ ತೀರ್ಮಾನಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಅಸಮಾಧಾನದ ಬಗ್ಗೆ ನನಗೆ ತಿಳಿದಿಲ್ಲ. ಅವರು ನಮ್ಮ ಜೊತೆಯಲ್ಲಿ ಏನನ್ನೂ ಹೇಳಿಲ್ಲ. ಇವೆಲ್ಲ ಹುಕ್ಕೇರಿ ಹೆಸರಿನಲ್ಲಿ ಬಿಜೆಪಿಯವರು ನಡೆಸುತ್ತಿರುವ ಸುಳ್ಳು ಪ್ರಚಾರ ಇದ್ದಿರಲೂ ಬಹುದು. ಅದನ್ನು ತಿಳಿದುಕೊಳ್ತೇವೆ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








