ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬಂದು ಒಂದು ವರ್ಷಗಳು ಕಳೆದರೂ ಹಲವು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಬೇರೆ ಕಾರಣ ನೀಡಿ ಮುಂದೂಡುತ್ತಾ ಬರಲಾಗಿತ್ತು.
ಆದರೆ, ಸಂಪುಟ ವಿಸ್ತರಣೆ ವಿಚಾರ ಕಗ್ಗಂಟಾಗುತ್ತಿದ್ದಂತೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ಮದ್ದು ಅರೆಯಲಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಲು ಹಲವು ಶಾಸಕರು ಕಳೆದ ಎರಡು ವಾರಗಳಿಂದ ಲಾಬಿ ಜೊತೆಗೆ ಒತ್ತಡ ಹೇರುತ್ತಿದ್ದಾರೆ. ಅತೃಪ್ತ ಶಾಸಕರನ್ನು ಸಮಾಧಾನ ಮಾಡುವ ಮೊದಲ ಭಾಗವಾಗಿ ಕೆಲವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಗಿಫ್ಟ್ ನೀಡಿ ಅಮಾಧಾನದ ಹೊಗೆ ಏಳದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ.

ಇದೇ ಮೊದಲ ಬಾರಿಗೆ 26 ನಿಮಗ ಮಂಡಳಿಗಳಿಗೆ ರಾಜ್ಯ ಸರ್ಕಾರ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಇದರಲ್ಲಿ ನಿನ್ನೆಯಷ್ಟೇ ರಚನೆಯಾದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವೂ ಸೇರಿದೆ. ಸಂಪುಟ ವಿಸ್ತರಣೆ ಬಿಕ್ಕಟ್ಟಿನ ನಡುವೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿಯಾದ 24 ಗಂಟೆಯಲ್ಲೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರಮುಖವಾಗಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಜಿ.ಎಸ್ ಪರಮಶಿವಯ್ಯ ಅವರನ್ನು ನೇಮಕ ಮಾಡಿದ್ದರೆ, ಪ್ರತಿಷ್ಠಿತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಯಲಹಂಕ ಶಾಸಕ ಎಸ್.ವಿಶ್ವನಾಥ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಬಿಜೆಪಿ ನಾಯಕಿ, ನಟಿ ತಾರಾ ಅನುರಾಧಾ ಅವರನ್ನು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ವಿವಿಧ ನಿಗಮಗಳ ನೂತನ ಅಧ್ಯಕ್ಷರ ಪಟ್ಟಿ ಇಂತಿದೆ…
1. ಬಿ.ಎಸ್ ಪರಮಶಿವಯ್ಯ-ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ
2. ಎಸ್.ಅರ್ ವಿಶ್ವನಾಥ್-ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
3. ತಾರಾ ಅನುರಾಧ-ಅರಣ್ಯ ಅಭಿವೃದ್ಧಿ ನಿಗಮ
4. ಬಿ.ಸಿ.ನಾಗೇಶ್-ಕಾರ್ಮಿಕ ಕಲ್ಯಾಣ ಮಂಡಳಿ
5. ಬಿ.ಕೆ.ಮಂಜುನಾಥ್-ನಾರು ಅಭಿವೃದ್ಧಿ ಮಂಡಳಿ
6. ಎಸ್.ಆರ್ ಗೌಡ- ರೇಷ್ಮೆ ಉದ್ಯಮಗಳ ನಿಗಮ
7. ಕೆ.ವಿ.ನಾಗರಾಜ್ -ಮಾವು ಅಭಿವೃದ್ಧಿ ನಿಗಮ
8. ಸವಿತಾ ವಿಶ್ವನಾಥ್ ಶೆಟ್ಟಿ-ರೇಷ್ಮೆ ಮಾರಾಟ ಮಂಡಳಿ
9. ಚಂದು ಪಾಟೀಲ್-ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ
10. ತಿಪ್ಪೇಸ್ವಾಮಿ-ತುಂಗಭದ್ರಾ ಕಾಲುವೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ)
11. ಕಿರಣ್ ಕುಮಾರ್-ಜೈವಿಕ ತಂತ್ರಜ್ಞಾನ ನಿಗಮ
12. ಸಿ.ಮುನಿಕೃಷ್ಣ-ಆದಿಜಾಂಭವ ನಿಗಮ
13. ಎಂ.ರಾಮಚಂದ್ರ-ಕೇಂದ್ರ ಪರಿಹಾರ ಸಮಿತಿ
14. ಹೆಚ್. ಹನುಮಂತಪ್ಪ-ಸಫಾಯಿ ಕರ್ಮಚಾರಿ ನಿಗಮ
15. ದುರ್ಯೋಧನ ಐಹೊಳೆ-ಅಂಬೇಡ್ಕರ್ ಅಭಿವೃದ್ಧಿ ನಿಗಮ
16. ನರೇಶ್ ಕುಮಾರ್-ಸವಿತಾ ಸಮಾಜ ಅಭಿವೃದ್ಧಿ ನಿಗಮ
17. ಗಿರೀಶ್ ಉಪ್ಪಾರ್-ಉಪ್ಪಾರ ಅಭಿವೃದ್ಧಿ ನಿಗಮ
18. ಬಾಬು ಪತ್ತಾರ್-ವಿಶ್ವಕರ್ಮ ಅಭಿವೃದ್ಧಿ ನಿಗಮ
19. ವಿಜುಗೌಡ ಪಾಟೀಲ್-ರಾಜ್ಯ ಬೀಜ, ಸಾವಯವ ಪ್ರಮಾಣ ಸಂಸ್ಥೆ
20. ತಮ್ಮೇಶ ಗೌಡ-ವಿದ್ಯುತ್ ಕಾರ್ಖಾನೆ ನಿಗಮ
21. ಮಹದೇವಸ್ವಾಮಿ-ಮೈಸೂರು ಮೃಗಾಲಯ ಪ್ರಾಧಿಕಾರ
22. ಎಂ.ರುದ್ರೇಶ್-ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ
23. ರಘು ಆರ್-ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
24. ಬಾಬು ಪತ್ತಾರ್- ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮ
25. ನಿತಿನ್ ಕುಮಾರ್-ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ
26. ಲಿಂಗಾರೆಡ್ಡಿ-ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ
27. ಎಸ್.ಇ.ಚಿಕ್ಕನಗೌಡ-ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ








