ಬೆಂಗಳೂರು: ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ ಯಾಕೆ? ನನ್ನ ಮೇಲೆ ನಡೆಯುತ್ತಿರುವ ತನಿಖೆ ದ್ವೇಷದ ರಾಜಕಾರಣವಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಸದಾಶಿವನಗರ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ. ನಾನು ಮಾಡಬಾರದ ಕೆಲಸ ಮಾಡಿಲ್ಲ. ಹೀಗಾಗಿ ಹೆದರುವ ಅಗತ್ಯವಿಲ್ಲ. ನಾನು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ನನ್ನ ವಿರುದ್ಧ ತನಿಖೆ ಮಾಡುವಂತೆ ಸಿಬಿಐಗೆ ಅನುಮತಿ ನೀಡಿದ್ದಾರೆ. ಇದುವರೆಗೂ ಯಾರ ಮೇಲೆ ಈ ರೀತಿ ತನಿಖೆ ಮಾಡಿಸಿದ್ದಾರೆ? ರಾಜ್ಯದಲ್ಲಿ ನಾನೊಬ್ಬನೇ ಆಸ್ತಿ ಸಂಪಾದಿಸಿದ್ದೇನಾ? ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯಾ? ಯಾವುದಾದರೂ ಆರೋಪ ಸಾಬೀತಾಗಿದೆಯಾ? ಯಾರ ಬಳಿಯಾದರೂ ನಾನು ಲಂಚ ಪಡೆದಿದ್ದೇನಾ? ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನಾ? ಇಂಧನ ಸಚಿವ ಆಗಿದ್ದಾಗ ಅಕ್ರಮ ಮಾಡಿದ್ದೇನಾ? ಯಡಿಯೂರಪ್ಪನವರೇ ಅಧಿಕಾರದಲ್ಲಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಸಿಬಿಐಗೆ ಕೊಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ಇದೊಂದು ತನಿಖೆ ಮಾಡುವ ಪ್ರಕರಣವಲ್ಲ ಎಂದು ಅಡ್ವೊಕೇಟ್ ಜನರಲ್ ಅವರೇ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿರುವ ಎಸಿಬಿಯಿಂದಲೇ ವಿಚಾರಣೆ ನಡೆಸಬಹುದು ಎಂದು ತಿಳಿದ್ದಾರೆ. ಆದರೂ ಸರ್ಕಾರದ ಒತ್ತಡದ ಮೇಲೆ ಈ ವಿಚಾರಣೆ ನಡೆಯುತ್ತಿದೆ ಎಂದು ದೂರಿದರು.
ಅಧಿಕಾರಿಗಳ ಕಾರ್ಯ ಪ್ರಶ್ನಿಸುವುದಿಲ್ಲ
ನಾನು ಸಿಬಿಐ ಅಧಿಕಾರಿಗಳ ತನಿಖಾ ವ್ಯವಸ್ಥೆ ಪ್ರಶ್ನಿಸುವುದಿಲ್ಲ. ಅವರು ನಮಗೆ ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ. ಅವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಕೈಪಿಡಿ ನಾನು ಓದಿದ್ದೇನೆ. 48 ದಿನ ನಾನು ಈ ಕುರಿತ ಪುಸ್ತಕಗಳನ್ನು ಓದಿದ್ದೇನೆ. ಅವರಿಗೆ ಬರುವ ಮಾರ್ಗದರ್ಶನದಂತೆ ಅವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾನು ದೂರುವುದಿಲ್ಲ.
ಸಿಬಿಐ ಕಚೇರಿ ಬಳಿ ಯಾರೂ ಬರಬೇಡಿ
ನಾನು ವಿಚಾರಣೆಗೆ ಹಾಜರಾಗಲು ಸಿಬಿಐ ಕಚೇರಿಗೆ ಹೋದಾಗ ಯಾರು ಕೂಡ ಅಲ್ಲಿಗೆ ಬರಬಾರದು. ನಿಮಗೆ ಮುಜುಗರ ತರುವ ಯಾವುದೇ ಕೆಲಸ ನಾನು ಮಾಡಿಲ್ಲ. ನನಗೆ ಏನಾಗುತ್ತದೋ ಎಂಬ ಆತಂಕ ಬೇಡ. ಅಧಿಕಾರಿಗಳು ಅವರ ಕೆಲಸ ಮಾಡುತ್ತಾರೆ. ಅಲ್ಲಿಗೆ ಬಂದು ಯಾರ ವಿರುದ್ಧವೂ ಘೋಷಣೆ ಹಾಕುವುದು ಬೇಡ. ಪರಿಸ್ಥಿತಿ ಕೈಮೀರಿದರೆ ನಮಗೆ ಕೆಟ್ಟ ಹೆಸರು ಬರುತ್ತದೆ ಎಂದು ಡಿ.ಕೆ ಶಿವಕುಮಾರ್ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel