ದಿನದ ಪ್ರಮುಖ 10 ಸುದ್ದಿಗಳು
01. ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ : ದೇಶಾದ್ಯಂತ ಅನ್ನದಾತರಿಂದ ದೆಹಲಿ ಚಲೋ..!
ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಉಗ್ರ ಸ್ವರೂಪ ಪಡೆದುಕೊಂಡಿದೆ.ದೆಹಲಿ ಚಲೋ ಚಳಚಳಿ ಹಿನ್ನೆಲೆ ರೈತರು ಪಂಜಾಬ್ ಮೂಲಕ ಹರಿಯಾಣ ಪ್ರವೇಶಿಸಲು ಯತ್ನಿಸಿದರು. ಪಂಜಾಬ್ ಮತ್ತು ಹರಿಯಾಣ ಗಡಿ ಭಾಗದಲ್ಲಿರುವ ಶಂಭೂ ಅಂತಾರಾಜ್ಯ ಗಡಿ ಸಮೀಪ ಪಂಜಾಬ್ ರೈತರು ಹರಿಯಾಣ ಪ್ರವೇಶಿಸದಂತೆ ಪೊಲೀಸರು ತಡೆ ಹಿಡಿದರು. ಪೊಲೀಸರ ಈ ವರ್ತನೆಯಿಂದ ಕುಪಿತಗೊಂಡ ರೈತ ಸಮುದಾಯ ಬ್ಯಾರಿಕೇಟ್ ಗಳನ್ನು ಕಿತ್ತು ನದಿಗೆ ಎಸೆದು ಹರಿಯಾಣ ಪ್ರವೇಶಿಸಲು ಮುಗಿ ಬಿದ್ದರು.
ಏಕಾಏಕಿ ರೊಚ್ಚಿಗೆದ್ದ ರೈತರನ್ನು ತಡೆ ಹಿಡಿಯಲು ವಿಫಲರಾದ ಪೊಲೀಸರು ಉದ್ರಿಕ್ತ ಗುಂಪಿನ ಮೇಲೆ ಜಲಪಿರಂಗಿ ಪ್ರಯೋಗಿಸಿದರು.
02. ರೈತರ ಧ್ವನಿ ಕೇಳದ ಬಿಜೆಪಿ | ಪ್ರತಿಭಟನೆ ಹತ್ತಿಕ್ಕಲು ಜಲ ಫಿರಂಗಿ ಬಳಕೆ’
ನವದೆಹಲಿ : ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ದೇಶದ ರೈತರು ದೆಹಲಿ ಚಲೋ ಚಳವಳಿ ಹಮ್ಮಿಕೊಂಡಿದ್ದು, ರೈತರ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿ ನೀಡಿದ್ದು, ರೈತರ ಧ್ವನಿ ಕೇಳದ ಬಿಜೆಪಿಯು ಪ್ರತಿಭಟನೆ ಹತ್ತಿಕ್ಕಲು ಜಲ ಫಿರಂಗಿ ಬಳಸುತ್ತಿದೆ ಎಂದು ತೀವ್ರವಾಗಿ ಕಿಡಿಕಾರಿದ್ದಾರೆ.
ನೂತನ ಮಸೂದೆ ವಿರುದ್ಧ ಪ್ರತಿಭಟನೆಗೆ ಇಳಿದಿರುವ ರೈತರ ಧ್ವನಿ ಕೇಳುವ ಬದಲು ಬಿಜೆಪಿ ಸರ್ಕಾರ ಅವರ ವಿರುದ್ಧ ಜಲಫಿರಂಗಿ ಬಳಕೆ ಮಾಡುತ್ತಿದ್ದಾರೆ. ಬಂಡವಾಳಶಾಹಿಗಳಿಗೆ ಬ್ಯಾಂಕುಗಳು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಮತ್ತು ಸಾಲ ಮನ್ನಾ ಮಾಡಲಾಗುತ್ತಿದ್ದು, ರೈತರಿನಿಂದ ಎಲ್ಲವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಗುಡುಗಿದ್ದಾರೆ.
03. 2008ರ ಮುಂಬೈ ಉಗ್ರ ದಾಳಿಗೆ ಇಂದಿಗೆ 12 ವರ್ಷ: ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಾಥ್ ಕೊಟ್ಟ ಅಮೆರಿಕಾ..!
ಮುಂಬೈ: 26/11ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಮುಂಬೈ ಉಗ್ರ ದಾಳಿಯ ಕರಾಳತೆಗೆ ಇಂದಿಗೆ 12 ವರ್ಷಗಳು ಕಳೆದಿವೆ. ಈ ಭೀಕರ ಘಟನೆಯಲ್ಲಿ 166 ಜನರು ಬಲಿಯಾಗಿದ್ದರು. 2008 ನವೆಂಬರ್ 26ರಂದು ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ನಡೆಸಿದ ಭೀಕರ ದಾಳಿಯು ಸುಮಾರು ನಾಲ್ಕು ದಿನಗಳ ಕಾಲ ಮುಂದುವರೆದಿತ್ತು. ಈ ದಾಳಿಯಲ್ಲಿ 166ಮಂದಿ ಸಾವನ್ನಪ್ಪಿ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇಂದಿಗೆ ಈ ಕರಾಳತೆಗೆ 12 ವರ್ಷಗಳಾಗಿದ್ದು, ರಾಜಕೀಯ ಗಣ್ಯರು, ಅನೇಕ ಕ್ಷೇತ್ರಗಳ ಪ್ರಮುಖರು ಅಂದು ಪ್ರಾಣ ಕಳೆದುಕೊಂಡಿದ್ದ ಎಲ್ಲರಿಗೂ ಗೌರವ ನಮನ ಸಲ್ಲಿಸುತ್ತಿದ್ದಾರೆ.
2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಕರಾಳತೆಯನ್ನ ದೇಶ ಈವರೆಗೂ ಮರೆತಿಲ್ಲ. 2008ರ ಮುಂಬೈ ದಾಳಿ ಇತಿಹಾಸದ ಪುಟದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿದೆ. ಇನ್ನೂ ಈ ಬಗ್ಗೆ ಅನೇಕ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅದರಂತೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಹ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು, ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವದ ನಮನಗಳು. ಭದ್ರತಾ ಪಡೆಗಳ ತ್ಯಾಗಕ್ಕೆ ನಾವೆಲ್ಲ ಚಿರಖುಣಿಗಳು ಎಂದು ಬರೆದುಕೊಂಡಿದ್ದಾರೆ.
04. ರೋಷನ್ ಬೇಗ್ಗೆ ಅನಾರೋಗ್ಯ: ಜೈಲಿನಿಂದ ಜಯದೇವ ಆಸ್ಪತ್ರೆಗೆ ಶಿಫ್ಟ್
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ರೋಷನ್ ಬೇಗ್ ಅನಾರೋಗ್ಯದಿಂದ ಬಳಲುತ್ತಿದ್ದು ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿನ್ನೆಯಷ್ಟೇ ಸಿಬಿಐ ಕೋರ್ಟ್, ಹೆಚ್ಚಿನ ವಿಚಾರಣೆಗೆ ರೋಷನ್ ಬೇಗ್ ಅವರನ್ನು 3 ದಿನಗಳ ಸಿಬಿಐ ಕಸ್ಟಡಿಗೆ ನೀಡಿತ್ತು. ಆದರೆ, ಕೋರ್ಟ್ ಆದೇಶದೊಂದಿಗೆ ರೋಷನ್ ಬೇಗ್ರನ್ನು ವಶಕ್ಕೆ ಪಡೆಯಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದ ಸಿಬಿಐ ಅಧಿಕಾರಿಗಳು ವಾಪಸ್ ಬಂದಿದ್ದಾರೆ.
ಕಳೆದ ಒಂದು ವಾರದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೋಷನ್ ಬೇಗ್ ಬಿಪಿ, ಶುಗರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ಸಣ್ಣ ಪ್ರಮಾಣದಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳು ರೋಷನ್ ಬೇಗ್ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
05. ಜಾತಿ ಗಣತಿ | ಯಾರ್ಯಾರು ಎಷ್ಟಿದ್ದಾರೆ ಎಂಬುದು ನೋಡಬೇಕಲ್ಲವೇ
ಬೆಂಗಳೂರು : ಸ್ವಾತಂತ್ರ್ಯ ಬಂದು 74 ವರ್ಷ ಆಯಿತು. ಯಾರ್ಯಾರು ಎಷ್ಟಿದ್ದಾರೆ ಎಂಬುದು ನೋಡಬೇಕಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಜಾತಿ ಗಣತಿ ತಾರ್ಕಿಕ ಅಂತ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜಯಪ್ರಕಾಶ್ ಕೇವಲ ರಿಪೋರ್ಟ್ ಕೊಡುತ್ತಾರೆ.
ಆದರೆ ಸರ್ಕಾರ ಅದನ್ನ ಸ್ವೀಕರಿಸುವ ಕೆಲಸ ಮಾಡುತ್ತಿಲ್ಲ. ವರದಿ ಏನಿದೆ ಎಂಬುದು ನನಗೂ ತಿಳಿದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷ ಕಳೆದಿದೆ. ಯಾರ್ಯಾರು ಎಷ್ಟಿದ್ದಾರೆ ಎಂಬುದು ನೋಡಬೇಕಲ್ಲವೇ? ಅದಕ್ಕಾಗಿ 160 ಕೋಟಿ ಖರ್ಚು ಮಾಡಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದು ಬೇಡ.ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎನ್ನುವುದು ಬಿಜೆಪಿ ನೀತಿ. ಜಾತಿ ಗಣತಿ ಸರ್ಕಾರ ಒಮ್ಮೆ ಪರಿಶಿಲನೆ ಮಾಡಲಿ ಎಂದು ಹೇಳಿದರು.
06. ನಿವಾರ್ ಅಬ್ಬರ : ರಾಜ್ಯದ 8 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್
ಬೆಂಗಳೂರು : ನಿವಾರ್ ಚಂಡಮಾರುತದ ಎಫೆಕ್ಟ್ ರಾಜ್ಯದ ಮೇಲೂ ಬೀರಿದ್ದು, ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತಮಿಳುನಾಡಿನ ಕರಾವಳಿ ಭಾಗದಲ್ಲಿ ನಿವಾರ್ ಚಂಡಮಾರುತದ ಅಬ್ಬರ ಜೋರಾಗಿದೆ. ಅಲ್ಲಿ ನಿವಾರ್ ಭಾರಿ ಅವಾಂತರಗಳನ್ನು ಸೃಷ್ಠಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ರಾಜ್ಯದ ಎಂಟು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
07. ಕೊರೋನಾ 2ನೇ ಅಲೆ ಭೀತಿ: ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ
ನವದೆಹಲಿ: ಚಳಿಗಾಲದಲ್ಲಿ ಕೊರೋನಾ ಎರಡನೇ ಅಲೆ ಶುರುವಾಗುವ ಸಂಭವಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ನಿಯಮಗಳನ್ನು ಬಿಗಿಗೊಳಿಸಿ ಮಾರ್ಗಸೂಚಿ ಹೊರಡಿಸಿದೆ.
ಈ ಆದೇಶ ಡಿಸೆಂಬರ್ 1 ರಿಂದ ಡಿಸೆಂಬರ್ 31ರವರೆಗೆ ಜಾರಿಯಲ್ಲಿದ್ದು, ಈ ಮಾರ್ಗಸೂಚಿ ನಿಯಮಗಳನ್ನು ಜಾರಿಗಳಿಸುವ ನಿರ್ಧಾರಗಳನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ.
ಮಾರ್ಗಸೂಚಿಯಲ್ಲೇನಿದೆ..
* ಕಂಟೈನ್ಮೆಂಟ್ ವಲಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಅಗತ್ಯ ವಸ್ತುಗಳನ್ನು ತರಲು ಮಾತ್ರ ಅನುಮತಿ ನೀಡಬೇಕು.
* ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಿಸಬೇಕು. ಜಿಲ್ಲಾಡಳಿತ ಕಂಟೈನ್ಮೆಂಟ್ ವಲಯಗಳ ಹೆಸರನ್ನು ವೆಬ್ಸೈಟ್ಗಳಲ್ಲಿ ಪ್ರಕಟಿಸಬೇಕು.
* ಸಿನಿಮಾ ಮಂದಿರ ಸೇರಿದಂತೆ ಧಾರ್ಮಿಕ, ಕ್ರೀಡೆ, ಮನರಂಜನೆ ಕಾರ್ಯಕ್ರಮಗಳಿಗೆ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ. ಮುಚ್ಚಿದ ಹಾಲ್ ಗಳಲ್ಲಿ 200 ಮಂದಿಗೆ ಅವಕಾಶವಿದೆ. ಆದರೂ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಗರಿಷ್ಠ 100ಜನಕ್ಕೆ ಅವಕಾಶ ನೀಡಬೇಕು.
* ಅನಾರೋಗ್ಯ ಇರುವವರು ಮತ್ತು 10 ವರ್ಷದ ಒಳಗಿನ ಮಕ್ಕಳು ಮನೆಯಲ್ಲಿರಬೇಕು.
* ರಾಜ್ಯಗಳ ನಡುವಿನ ಓಡಾಟಕ್ಕೆ ಅವಕಾಶವಿದೆ.
* ಲಾಕ್ಡೌನ್ ಬದಲು ನೈಟ್ ಕಫ್ರ್ಯೂ ಹೇರುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡಿದೆ.
* ಕೇಂದ್ರದೊಂದಿಗೆ ಸಮಾಲೋಚನೆ ನಡೆಸದೇ ಲೋಕಲ್ ಲಾಕ್ಡೌನ್ ಮಾಡುವಂತಿಲ್ಲ.
* ಕಡ್ಡಾಯ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮೇಲೆ ಸರ್ಕಾರ ನಿಗಾವಹಿಸಬೇಕು.
* ನಿಯಮ ಮೀರಿದಂತವರಿಗೆ ದಂಡ ವಿಧಿಸುವಂತಹ ಕ್ರಮಗಳನ್ನು ರಾಜ್ಯ ಸರ್ಕಾರಗಳು ಜರುಗಿಸಬಹುದು.
08. ಆಸ್ಕರ್ ಪ್ರಶಸ್ತಿಗೆ ಭಾರತದಿಂದ ‘ಜಲ್ಲಿಕಟ್ಟು’ ಚಿತ್ರ ಆಯ್ಕೆ
ನವದೆಹಲಿ : ಮಲಯಾಳಂನ ಜಲ್ಲಿಕಟ್ಟು ಚಲನಚಿತ್ರಕ್ಕೆ ಭಾರತದಿಂದ ಆಸ್ಕರ್ ಗೆ ಅಧಿಕೃತ ಪ್ರವೇಶ ಸಿಕ್ಕಿದೆ.
ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಜಲ್ಲಿಕಟ್ಟು ಚಲನಚಿತ್ರವನ್ನು ಆಸ್ಕರ್ ಅವಾರ್ಡ್ ನ 93ನೇ ಅಕಾಡೆಮಿ ಪ್ರಶಸ್ತಿ ವಿಭಾಗದಲ್ಲಿ ಭಾರತದಿಂದ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
2019ರ ಅಕ್ಟೋಬರ್ನಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣ ಇದೆ.
ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ 14 ಸದಸ್ಯರ ಸಮಿತಿಯು ಮಲಯಾಳಂ ಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದೆ.
09. ಬಡವರ ರಿಯಲ್ ಹೀರೋ ಸೋನು ಸೂದ್ ಹೆಸರಲ್ಲಿ ನಡೆಯುತ್ತಿದೆ ಮಹಾವಂಚನೆ : ಹುಷಾರಾಗಿರಿ ಎಂದ ನಟ..!
ರೀಲ್ ಲೈಫ್ ನಲ್ಲಿ ವಿಲ್ಲನ್ ಆಗಿದ್ರು ರಿಯಲ್ ಲೈಫ್ ನಲ್ಲಿ ಜನರ ಪಾಲಿನ ಹೀರೋ ಆಗಿರುವ ಸೋನು ಸೂದ್ ಅವರು ಲಾಕ್ ಡೌನ್ ಸಮಯದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನ ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳಿಗೆ ನೆರವಾಗಿ, ಲಾಕ್ ಡೌನ್ ವೇಳೆ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಸಹಾಯ ಮಾಡಿ ಮಾನವೀಯತೆ ಪ್ರದರ್ಶಿಸಿರುವ ಸೋನು ಸೂದ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಆದ್ರೆ ಸೋನು ಸೂದ್ ಅವರ ಹೆಸರಲ್ಲಿ ಇದೀಗ ಜಾಲತಾಣದಲ್ಲಿ ಭಾರೀ ಮೋಸವಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ಸ್ವತಃ ಸೋನು ಸೂದ್ ಅವರೇ ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಎಚ್ಚರಿಸಿದ್ದಾರೆ.
ಹೌದು ಸೋನು ಸೂದ್ ಅವರ ಹೆಸರು ದುರ್ಬಳಕೆಯಾಗ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು
ಹುಷಾರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ. ಅಂದ್ಹಾಗೆ ಸೋನು ಸೂದ್ ಅವರ ಹೆಸರು ಬಳಸಿ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಜನರನ್ನ ಯಾಮಾರಿಸುವ ಪ್ರಯತ್ನ ಮಾಡ್ತಿರೋದು ಸೋನು ಅವರ ಗಮನಕ್ಕೆ ಬಂದಿದೆ. ಹೀಗಾಗಿ ಈ ಬಗ್ಗೆ ಸಾಕ್ಷಿ ಸಮೇತ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ ಸೋನು.
10. ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ನಿಧನ
ಅರ್ಜೆಂಟೀನಾ, ನವೆಂಬರ್26: ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಹೃದಯ ಸ್ತಂಭನದಿಂದ ಅವರ ಮನೆಯಲ್ಲಿ ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆಟ ಮುಗಿಸಿ ಹೊರಟು ಹೋದ ಡೀಗೋ ಮರಡೋನಾ…!
1986 ರ ವಿಶ್ವಕಪ್ ಪ್ರಶಸ್ತಿಗೆ ಅರ್ಜೆಂಟೀನಾವನ್ನು ಮುನ್ನಡೆಸಲು ಕಾರಣನಾದ ಪ್ರಮುಖ ಆಟಗಾರನಿಗೆ 60 ವರ್ಷ ವಯಸ್ಸಾಗಿತ್ತು. ಇದಕ್ಕೂ ಮುನ್ನ ನವೆಂಬರ್ನಲ್ಲಿ ಮರಡೋನಾ ಮೆದುಳಿನ ಹೆಪ್ಪುಗಟ್ಟುವಿಕೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ಒಂದು ವಾರದ ನಂತರ ಅವರನ್ನು ಬ್ಯೂನಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ಮನೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದರು.
ಅವರು ಅಕ್ಟೋಬರ್ 30 ರಂದು ತಮ್ಮ 60 ನೇ ಜನ್ಮದಿನವನ್ನು ಆಚರಿಸಿದ್ದರು ಮತ್ತು ಪ್ಯಾಟ್ರೊನಾಟೊ ವಿರುದ್ಧದ ಗಿಮ್ನಾಷಿಯಾದ ರಾಷ್ಟ್ರೀಯ ಚಾಂಪಿಯನ್ಶಿಪ್ ಪಂದ್ಯವನ್ನು ಆ ರಾತ್ರಿ ವೀಕ್ಷಿಸಿದ್ದರು. ಅವರ ತಂಡವು 3-0 ಗೋಲುಗಳಿಂದ ಜಯಗಳಿಸಿತು.ಅವರ ಜನ್ಮದಿನದ ಮೊದಲು, ಕೋವಿಡ್-19 ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ನಂತರ ಮರಡೋನಾ ಮನೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದರು.
ಬ್ರೆಜಿಲ್ನ ಪೀಲೆ ಜೊತೆಗೆ, ಮರಡೋನಾ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರೆಂದು ಪ್ರಸಿದ್ಧರಾಗಿದ್ದರು. ಮರಡೋನ 1983ರಲ್ಲಿ ಸ್ಪೇನ್ಗೆ ತೆರಳಿದ್ದು, ಬಳಿಕ ದುಶ್ಚಟಗಳಿಗೆ ದಾಸರಾಗಿ ಮಾದಕ ವ್ಯಸನಿಯಾಗಿ ಬದಲಾಗಿದ್ದರು. ಅದರಿಂದ ಹೊರಬರಲು ಸಾಧ್ಯವಾಗದೇ ಒದ್ದಾಡಿದ ಅವರಿಗೆ ವಿಪರೀತ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ಬಳಿಕ ಆಗಾಗ್ಗೆ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದ ಅವರು 2007ರಲ್ಲಿ ಹೆಪಟೈಟಿಸ್ಗೆ ಚಿಕಿತ್ಸೆ ಪಡೆದಿದ್ದರು.
ಗ್ಯಾಸ್ಟ್ರಿಕ್ ಸಮಸ್ಯೆಯ ಕಾರಣ ಬೈಪಾಸ್ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. 2019 ಜನವರಿಯಲ್ಲಿ ಹೊಟ್ಟೆಯೊಳಗೆ ಸಂಭವಿಸಿದ ರಕ್ತಸ್ರಾವದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ನಲ್ಲಿ ಮರಡೋನಾ ಮೆದುಳಿನ ಹೆಪ್ಪುಗಟ್ಟುವಿಕೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ನವೆಂಬರ್ 12ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel