ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಕಗ್ಗಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ನಿಂದ ಬಿಜೆಪಿಗೆ ವಲಸೆ ಬಂದ ಶಾಸಕರ `ಮಿತ್ರ ಮಂಡಳಿ’ಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ನಿನ್ನೆ ವಲಸಿಗ ಶಾಸಕರು, ಸಚಿವರು ಸಭೆ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಪ್ತರಸಭೆಯಲ್ಲಿ ಸಚಿವರಾದ ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜು, ಹೆಚ್.ವಿಶ್ವನಾಥ್, ಎಂಟಿಬಿ ನಾರಾಜ್ ಸೇರಿದಂತೆ ಬಹುತೇಕರು ಪಾಲ್ಗೊಂಡಿದ್ದರು. ಆರೋಗ್ಯ ಸಚಿವ ಕೆ.ಸುಧಾಕರ್ ಹೈದ್ರಾಬಾದ್ನಲ್ಲಿರುವ ಕಾರಣ ಗೈರು ಹಾಜರಾಗಿದ್ದರು.
ಮಿತ್ರ ಮಂಡಳಿಯ ಸಚಿವ ಸ್ಥಾನ ವಂಚಿತರಿಗೆ ಸಚಿವ ಸ್ಥಾನಕ್ಕಾಗಿ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕುವ ಬದಲು ಸಿ.ಪಿ ಯೋಗೇಶ್ವರ್ ಪರ ದಿಲ್ಲಿಯಲ್ಲಿ ಓಡಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ತಮ್ಮನ್ನು ತಾವು ವಲಸಿಗರ ನಾಯಕನಂತೆ ರಮೇಶ್ ಜಾರಕಿಹೊಳಿ ಬಿಂಬಿಸಿಕೊಳ್ಳುತ್ತಿದ್ದಾರೆಂದು ಕಿಡಿಕಾರುವ ಆಪ್ತರು, ರಮೇಶ್ ಜಾರಕಿಹೊಳಿ ಅವರನ್ನು ನಾವು ನಂಬಿಕೊಂಡು ಕುಳಿತರೆ ಸಚಿವ ಸ್ಥಾನ ಸಿಗುವುದಿಲ್ಲ, ಯಾವ ಸ್ಥಾನಮಾನವೂ ಸಿಗಲ್ಲ. ನಮ್ಮ ಗುಂಪಿನ ನಾಯಕರು ಎಂದು ನಾವು ರಮೇಶ್ ಜಾರಕಿಹೊಳಿ ಅವರನ್ನು ನಂಬಿದ್ದೆವು. ಆದರೆ, ನಮ್ಮ ನಂಬಿಕೆ ಹುಸಿಯಾಗಿದೆ. ಈ ವಿಚಾರದಲ್ಲಿ ಇನ್ನು ಮುಂದೆ ನಾವು ಒಗ್ಗಟ್ಟಾಗಿರಬೇಕು, ಯಾರನ್ನೂ ನಾಯಕರು ಎಂದು ಒಪ್ಪಿಕೊಳ್ಳಬಾರದು. ಯಡಿಯೂರಪ್ಪ ನಾಯಕತ್ವಕ್ಕೆ ಬೆಂಬಲವಾಗಿ ನಿಂತು ನಮ್ಮೊಂದಿಗೆ ಬಂದವರನ್ನು ಮಂತ್ರಿ ಮಾಡಲು ಪ್ರಯತ್ನಿಸಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರವಹಿಸಿದ್ದವರು ರಮೇಶ್ ಜಾರಕಿಹೊಳಿ. ಮೈತ್ರಿ ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್ ಅವರು ಬೆಳಗಾವಿ ಆಡಳಿತದಲ್ಲಿ ಮೂಗುತೂರಿಸುತ್ತಿದ್ದಾರೆಂದು ಬಂಡಾಯ ಎದ್ದಿದ್ದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್-ಜೆಡಿಎಸ್ನಲ್ಲಿದ್ದ ಅತೃಪ್ತ ಶಾಸಕರನ್ನು ಒಟ್ಟುಗೂಡಿಸಿ ಮೈತ್ರಿ ಸರ್ಕಾರ ಪತನಕ್ಕೆ ನಾಂದಿ ಹಾಡಿದ್ದರು.
ದೋಸ್ತಿ ಸರ್ಕಾರ ಪತನವಾಗಿ ಬಿಜೆಪಿಯಿಂದ ಮತ್ತೆ ಬಿ.ಎಸ್ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಇದೇ ಮಿತ್ರಮಂಡಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಹೊರತುಪಡಿಸಿ ಉಳಿದ ಎಲ್ಲರೂ ಗೆದ್ದು ಬಂದಿದ್ದಾರೆ.
ಅವರಲ್ಲಿ ಎಸ್.ಟಿ ಸೋಮಶೇಖರ್ ಸೇರಿದಂತೆ ಬಹುತೇಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಆದರೆ, ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್, ಆರ್.ಶಂಕರ್ಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದರೂ ಬಿಜೆಪಿ ಹೈಕಮಾಂಡ್ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಆಪರೇಷನ್ ಕಮಲ ಕಾರ್ಯಾಚರಣೆಗೆ ಸಾಥ್ ನೀಡಿದ್ದ ಸಿ.ಪಿ ಯೋಗೇಶ್ವರ್ಗೆ ಮಂತ್ರಿ ಸ್ಥಾನ ಕೊಡಿಸವುದರಲ್ಲಿ ಇರುವ ಆಸ್ತಿ ಮಿತ್ರ ಮಂಡಳಿಯ ಉಳಿದವರಿಗೆ ಸಚಿವ ಸ್ಥಾನ ಕೊಡಿಸಲು ಆಸಕ್ತಿ ವಹಿಸುತ್ತಿಲ್ಲ ಎನ್ನುವುದು ಸಭೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








