ನಾನು ಧೋನಿಯಲ್ಲ…ಧೋನಿಯಷ್ಟು ವೇಗ ನನ್ನಲ್ಲಿಲ್ಲ – ಮ್ಯಾಥ್ಯೂ ವಾಡೆ..!
ಮಹೇಂದ್ರ ಸಿಂಗ್ ಧೋನಿ.. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿಯಾಗಿದ್ದಾರೆ. ಆದ್ರೂ ಧೋನಿಯ ಹೆಸರು ಮಾತ್ರ ಈಗಲೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿದೆ.
ಅದು ಧೋನಿಯ ತಾಕತ್ತು.. ಮಾಹಿಯ ಮಹಿಮೆ.. ಕೂಲ್ ಕ್ಯಾಪ್ಟನ್ ಆಗಿ ಹೆಸರು ಮಾಡಿದ್ದ ಧೋನಿ ವಿಕೆಟ್ ಕೀಪರ್ ಆಗಿಯೂ ಅಷ್ಟೇ ಫೇಮಸ್ ಕೂಡ ಆಗಿದ್ದರು.
ಕ್ಷಣ ಮಾತ್ರದಲ್ಲಿ ಬ್ಯಾಟ್ಸ್ ಮೆನ್ ಗಳನ್ನು ವಂಚಿಸಿ ಸ್ಟಂಪ್ ಮಾಡುತ್ತಿದ್ದ ಧೋನಿ ಚತುರತೆ ವಿಶ್ವದ ಎಲ್ಲಾ ವಿಕೆಟ್ ಕೀಪರ್ ಗಳಿಗೂ ಮಾದರಿ ಹಾಗೂ ಸ್ಪೂರ್ತಿ. ಈ ವಿಚಾರದಲ್ಲಿ ಎರಡು ಮಾತಿಲ್ಲ.
ಇದೀಗ ಆಸ್ಟ್ರೇಲಿಯಾ ಪ್ರವಾಸದದ ವೇಳೆಯಲ್ಲೂ ಧೋನಿಯ ಹೆಸರು ಪ್ರಸ್ತಾಪವಾಗುತ್ತಿತ್ತು. ನಾಯಕನಾಗಿ ಹಾಗೂ ಮ್ಯಾಚ್ ಫಿನಿಶರ್ ಆಗಿಯೂ ಧೋನಿ ಅಲಭ್ಯತೆ ಟೀಮ್ ಇಂಡಿಯಾಗೆ ಕಾಡುತ್ತಿತ್ತು. ಅದರ ಮಧ್ಯೆಯೇ ಆಸ್ಟ್ರೇಲಿಯಾ ಆಟಗಾರರು ಕೂಡ ಧೋನಿಯ ವಿಕೆಟ್ ಕೀಪಿಂಗ್ ಚಾಕಚಕ್ಯತೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಹೌದು, ಅದು ಡಿಸೆಂಬರ್ 6ರಂದು ನಡೆದ ಎರಡನೇ ಟಿ-ಟ್ವೆಂಟಿ ಪಂದ್ಯ. 9ನೇ ಓವರ್.. ಶಿಖರ್ ಧವನ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ ಆಸ್ಟ್ರೇಲಿಯಾದ ನಾಯಕ ಮ್ಯಾಥ್ಯೂ ವಾಡೆ ಅವರು ಶಿಖರ್ ಧವನ್ ಅವರನ್ನು ಸ್ಟಂಪ್ ಔಟ್ ಮಾಡುವ ಯತ್ನ ಮಾಡಿದ್ದರು. ಥರ್ಡ್ ಅಂಪೈರ್ ನಾಟೌಟ್ ಅಂತ ತೀರ್ಪು ನೀಡಿದ್ದರು.
ಆಗ ಮ್ಯಾಥ್ಯೂ ವಾಡ ಹೇಳಿದ್ದು ಹೀಗೆ.. ಧೋನಿಯಲ್ಲ.. ಧೋನಿಯಷ್ಟು ವೇಗವಿರಲಿಲ್ಲ ಅಂತ ಶಿಖರ್ ಧವನ್ ಬಳಿ ಹೇಳಿರುವುದು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿದೆ.
ಅಂದ ಮೇಲೆ ಮ್ಯಾಥ್ಯೂ ವಾಡೆಗೂ ಗೊತ್ತು.. ಧೋನಿಯಿಂದ ಕಲಿಯುವುದು ತುಂಬಾನೇ ಇದೆ ಅನ್ನೋದು. ಹೀಗಾಗಿಯೇ ಎಲ್ಲರೂ ಧೋನಿಯಾಗೋಕೆ ಆಗಲ್ಲ.. ವಿಶ್ವ ಕ್ರಿಕೆಟ್‍ಗೆ ಧೋನಿಗೆ ಸರಿಸಾಟಿ ಧೋನಿಯೇ..!








