ಎಲೂರು : ನಿಗೂಢ ಕಾಯಿಲೆಯ ಕಾರಣ ಪತ್ತೆ ಹಚ್ಚಿದ ತಜ್ಞರ ತಂಡ
ಎಲೂರು, ಡಿಸೆಂಬರ್08: ಕುಡಿಯುವ ನೀರು ಮತ್ತು ಹಾಲಿನಲ್ಲಿನ ಸೀಸ ಮತ್ತು ನಿಕ್ಕಲ್ ಅಂಶವು ಆಂಧ್ರಪ್ರದೇಶದ ಎಲೂರು ನಗರದಲ್ಲಿನ ನಿಗೂಢ ಕಾಯಿಲೆಯ ಮೂಲ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇದುವರೆಗೆ ಈ ನಿಗೂಢ ಕಾಯಿಲೆಯು ಒಂದು ಜೀವವನ್ನು ಬಲಿ ತೆಗೆದುಕೊಂಡಿದ್ದು, 500 ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.
ಏಮ್ಸ್ ಮತ್ತು ಇತರ ರಾಜ್ಯ ಹಾಗೂ ಕೇಂದ್ರ ಸಂಸ್ಥೆಗಳ ತಜ್ಞರ ತಂಡಗಳ ಪ್ರಾಥಮಿಕ ಸಂಶೋಧನೆಗಳ ಆಧಾರದ ಮೇಲೆ ಆರೋಗ್ಯ ಅಧಿಕಾರಿಗಳು ಮಂಗಳವಾರ ಇಲ್ಲಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ವರದಿಯನ್ನು ಮಂಡಿಸಿದರು.
ಏಮ್ಸ್ ತಜ್ಞರು ಸಿದ್ಧಪಡಿಸಿದ ವರದಿಯನ್ನು ಉಲ್ಲೇಖಿಸಿ ಸೀಸ ಮತ್ತು ನಿಕ್ಕಲ್ ನಿಗೂಢ ಕಾಯಿಲೆಗೆ ಕಾರಣವಾದ ಅಂಶಗಳಾಗಿವೆ ಎಂದು ಸಿಎಂಒ ಪ್ರಕಟಣೆ ತಿಳಿಸಿದೆ.
ಶನಿವಾರ ರಾತ್ರಿಯಿಂದ ಫಿಟ್ಸ್ ಮತ್ತು ವಾಕರಿಕೆಗಳಿಂದ ಬಳಲುತ್ತಿದ್ದ ಜನರು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದರು.
ಜಿಜಿಹೆಚ್ ವೈದ್ಯರ ಪ್ರಕಾರ, 3-5 ನಿಮಿಷಗಳ ಕಾಲ ಅಪಸ್ಮಾರ, ಕೆಲವು ನಿಮಿಷಗಳವರೆಗೆ ವಾಂತಿ, ತಲೆನೋವು ಮತ್ತು ಬೆನ್ನು ನೋವು ಕಾಣಿಸಿಕೊಂಡಿದ್ದವು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಮತ್ತು ಇತರ ಸಂಸ್ಥೆಗಳು ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿವೆ ಮತ್ತು ಶೀಘ್ರದಲ್ಲೇ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ.
ರೋಗಿಗಳ ದೇಹದಲ್ಲಿನ ಹೆವಿ ಮೆಟಲ್ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಚಿಕಿತ್ಸೆಯ ಪ್ರಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಸಿಎಂಒ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಲ್ಲಿನ ಆರೋಗ್ಯ ಅಧಿಕಾರಿಗಳ ಪ್ರಕಾರ, ಸೋಂಕಿತ 505 ಜನರಲ್ಲಿ 370 ಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ ಮತ್ತು ಇನ್ನೂ 120 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.