==ಉತ್ತರಪ್ರದೇಶ, ಗುಜರಾತ್ ಮಾದರಿ ದಂಡ, ಶಿಕ್ಷೆ==
== 3 ರಿಂದ 7 ವರ್ಷ ಕಾಲ ಜೈಲು ಶಿಕ್ಷೆ ===
== ಅಪರಾಧಿಗಳಿಗೆ ನಿರ್ದಿಷ್ಟ ಅವಧಿವರೆಗೆ ಜಾಮೀನು ಇಲ್ಲ==
ಬೆಂಗಳೂರು: ಗುರುವಾರವೇ ವಿಧಾನಮಂಡಲ ಅಧಿವೇಶನ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಕಲಾಪದ ಅಜೆಂಡಾದಲ್ಲಿ ಇಲ್ಲದಿದ್ದರೂ ರಾಜ್ಯ ಸರ್ಕಾರ ತರಾತುರಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ತರಾತುರಿಯಲ್ಲಿ ವಿಧಾನಸಭೆಯಲ್ಲಿ ಮಂಡಿಸಿ, ಯಾವುದೇ ಚರ್ಚೆ ಇಲ್ಲದೇ ಅಂಗೀಕಾರ ಪಡೆದುಕೊಂಡಿದೆ.
ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲು ಮುಂದಾಗುತ್ತಲೇ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ಎತ್ತಿದರು. ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದಕ್ಕೆ ಜೆಡಿಎಸ್ ಸದಸ್ಯರು ಕೂಡ ಸಾಥ್ ನೀಡಿ ಪ್ರತಿಭಟನೆ ನಡೆಸಿದರು.
ಧರಣಿ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದು ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಗದ್ದಲದ ಮಧ್ಯೆಯೇ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಮಾಡಿಕೊಟ್ಟರು.
ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರೆ, ದನ ಕಡಿಯೋರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್‍ಗೆ ಶೇಮ್ ಶೇಮ್ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. ಗದ್ದಲ, ಘೋಷಣೆಯ ನಡುವೆಯೇ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು.
ಸದನ ಸಂಪ್ರದಾಯಗಳನ್ನು ಬಿಜೆಪಿ ನಾಶ ಮಾಡುತ್ತಿದೆ. ಬಿಜೆಪಿಯವರು ಪ್ರಜಾಪ್ರಭುತ್ವದ ಕೊಲೆಗಡುಕರು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು. ಸರ್ಕಾರದ ನಡೆಯನ್ನು ಖಂಡಿಸಿ ಕಾಂಗ್ರೆಸ್ ಶಾಸಕರು ಸಭಾತ್ಯಗ ಮಾಡಿದರು.
ನಾಳೆಯಿಂದ ಎಲ್ಲಾ ಕಲಾಪ ಬಹಿಷ್ಕಾರ: ಸಿದ್ದರಾಮಯ್ಯ
ಬಿಜೆಪಿಯಿಂದ ಸಂಸದೀಯ ಸಂಪ್ರದಾಯ ನಾಶವಾಗಿದೆ. ಸದನದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ರಹಸ್ಯವಾಗಿ ಮಂಡನೆ ಮಾಡಲಾಗಿದೆ. ಈ ಕುರಿತು ಕಲಾಪ ಸಲಹಾ ಸಮಿತಿಯಲ್ಲಿ ತಿಳಿಸಿಯೇ ಇಲ್ಲ. ಇದ್ದಕ್ಕಿದ್ದಂತೆ ಆಶ್ಚರ್ಯಕರ ರೀತಿ ಮಸೂದೆ ಮಂಡನೆ ಮಾಡಲಾಗಿದೆ. ಸ್ಪೀಕರ್ ಕೂಡಾ ವಿಧೇಯಕದ ಬಗ್ಗೆ ಹೇಳಿಲ್ಲ. ಗೋಹತ್ಯೆ ಮಸೂದೆ ಮೂಲಕ ಅರ್ಥವ್ಯವಸ್ಥೆ ನಾಶವಾಗಲಿದೆ. ಸಂಸದೀಯ ಪ್ರಜಾಪ್ರಭುತ್ವದ ಸಂಪ್ರದಾಯ ಬಿಜೆಪಿ ಸರ್ಕಾರ ನಾಶ ಮಾಡಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರ ಕಾನೂನು, ನೀತಿ ನಿಯಮಗಳನ್ನು ಗಾಳಿಗೆ ತೂರಿದೆ. ಪ್ರಜಾಪ್ರಭುತ್ವ ಕೊಲೆ ಮಾಡುವ ಕೊಲೆಗಡುಕರ ಜೊತೆ ಸದನ ನಡೆಸುವುದು ಸರಿಯಲ್ಲ. ಈ ಹಿನ್ನಲೆ ನಾಳೆ ಎಲ್ಲಾ ಕಲಾಪ ಬಹಿಷ್ಕಾರ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಆಗಿದೆ. ಈ ಸಂದರ್ಭದಲ್ಲಿ ಜನರ ಮೇಲೆ ಇದು ಯಾವ ಪರಿಣಾಮ ಬೀರಲಿದೆ. ಇದು ನೀತಿ ಸಂಹಿತೆ ವ್ಯಾಪ್ತಿಯಲ್ಲಿ ಬರಲ್ವಾ? ಇದು ಚುನಾವಣಾ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆ ಯಲ್ಲವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಚುನಾವಣಾ ಆಯೋಗಕ್ಕೆ ನಾವು ದೂರು ನೀಡುವುದಾಗಿ ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಮಸೂದೆ ಸ್ವಾಗತಿಸಿದ ಬಿಜೆಪಿ
ಗೋಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ಪಾಸ್ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ, ಮಸೂದೆ ರೂಪಿಸಿ, ವಿಧಾನಸಭೆ ಒಪ್ಪಿಗೆ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದ್ದಾರೆ.
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧದ ಕಠಿಣ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗುವ ಮೂಕ ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಹಾಗೂ ಸಂವಿಧಾನದ ಆಶಯವನ್ನು ಗೌರವಿಸಿದೆ. ಈ ಕಾಯ್ದೆಯ ಮೂಲಕ ರೈತರ ಆತಂಕ ದೂರ ಮಾಡಿ, ಗೋಪೂಜೆ ಮಾಡುವವರಿಗೂ ಸಂತಸ ಮೂಡುವಂತೆ ಮಾಡಿದೆ ಎಂದು ಕಟೀಲ್ ಸಮರ್ಥಿಸಿಕೊಂಡಿದ್ದಾರೆ.
ಗೋಹತ್ಯೆ ಮಸೂದೆಯಲ್ಲೇನಿದೆ..?
ಹಸು, ಕರು, ದನ, ಎಮ್ಮೆಗಳ ಹತ್ಯೆ ನಿಷೇಧ ಮಾಡಲಾಗಿದೆ. ಹತ್ಯೆಗಾಗಿ ಗೋವುಗಳ ಸಾಗಣೆಗೆ ಸಂಪೂರ್ಣ ನಿಬರ್ಂಧ ಹೇರಲಾಗಿದೆ. ಗೋಹತ್ಯೆಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲು ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
üಗೋಹತ್ಯೆ ಅಪರಾಧದಲ್ಲಿ 2ನೇ ಬಾರಿ ಸಿಕ್ಕಿಬಿದ್ರೆ 10 ಲಕ್ಷ ರೂ ದಂಡ, 3 ರಿಂದ 7 ವರ್ಷ ಕಾಲ ಜೈಲು ಶಿಕ್ಷೆ ಮತ್ತು ಅಪರಾಧಿಗಳಿಗೆ ನಿರ್ದಿಷ್ಟ ಅವಧಿವರೆಗೆ ಜಾಮೀನು ಸಿಗುವುದೇ ಇಲ್ಲ.
13 ವರ್ಷ ಮೇಲ್ಪಟ್ಟ ಎಮ್ಮೆಗಳ ಹತ್ಯೆಗೆ ಷರತ್ತುಬದ್ಧ ಒಪ್ಪಿಗೆ ನೀಡಿದ್ದು, ಸಂಬಂಧಿಸಿದ ಸಂಸ್ಥೆಗಳ ಅನುಮತಿ ಅಗತ್ಯವಾಗಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಗುಜರಾತ್, ಉತ್ತರ ಪ್ರದೇಶ ಸರ್ಕಾರಗಳು ಜಾರಿಗೆ ತಂದಿರುವ ಕಾಯ್ದೆ ಮಾದರಿಯಲ್ಲಿ ಶಿಕ್ಷೆ, ದಂಡ ವಿಧಿಸುವುದು ಹಾಗೂ ಗೋಹತ್ಯೆ ಪ್ರಕರಣಗಳ ವಿಚಾರಣೆ ವಿಶೇಷ ಕೋರ್ಟ್ ನಲ್ಲಿ ನಡೆಯಲಿದೆ ಎಂದು ಕಾಯ್ದೆಯಲ್ಲಿ ಸೇರಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel