ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯೇ ಅಗ್ರಜ..!
ಟೀಮ್ ಇಂಡಿಯಾ ನಾಯಕ ಹಾಗೂ ವಿಶ್ವ ಕ್ರಿಕೆಟ್ ನ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರು ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ದಾಖಲಿಸಿರುವ ವಿರಾಟ್ ಕೊಹ್ಲಿ ಒಟ್ಟು 842 ರನ್ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಇನ್ನು ಸ್ನಾಯು ಸೆಳೆತದಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಎರಡನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ರೋಹಿತ್ ಶರ್ಮಾ 837 ಅಂಕಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಹಾಗೇ ಪಾಕಿಸ್ತಾನದ ಬಾಬರ್ ಅಝಮ್ 818 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ರೆ, ನ್ಯೂಜಿಲೆಂಡ್ ನ ರಾಸ್ ಟೇಲರ್ 791 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ ಆಸ್ಟ್ರೇಲಿಯಾ ಏಕದಿನ ತಂಡದ ನಾಯಕ ಆರೋನ್ ಫಿಂಚ್ ಅವರು 790 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾದ ಡುಪ್ಲೇಸಸ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ನ್ಯೂಜಿಲೆಂಡ್ ನ ಕಾನೆ ವಿಲಿಯಮ್ಸನ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಹಾಗೂ ಇಂಗ್ಲೆಂಡ್ ನ ಜೋನಿ ಬೇರ್ ಸ್ಟೋವ್ ಅವರು ಟಾಪ್ ಟೆನ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತದ ಪರ ಶಿಖರ್ ಧವನ್ 16ನೇ ಸ್ಥಾನ, ಕೇದಾರ್ ಜಾಧವ್ 42ನೇ ಸ್ಥಾನ ಹಾಗೂ ಹಾರ್ದಿಕ್ ಪಾಂಡ್ಯ ಟಾಪ್ 50ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನೊಂದೆಡೆ ಬೌಲಿಂಗ್ ವಿಭಾಗದಲ್ಲಿ ನ್ಯೂಜಿಲೆಂಡ್ ನ ವೇಗಿ ಟ್ರೆಂಟ್ ಬೌಲ್ಟ್ ಅವರು ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಆಫಘಾನಿಸ್ತಾನದ ಮುಜೀಬ್ ಉರ್ ರಹಮಾನ್ ಎರಡನೇ ಸ್ಥಾನದಲ್ಲಿದ್ರೆ, ಭಾರತದ ಜಸ್ಪ್ರಿತ್ ಬೂಮ್ರಾ ಅವರು ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ಭಾರತದ ಪರ ಕುಲದೀಪ್ ಯಾದವ್ 21ನೇ ಸ್ಥಾನ, ಯುಜುವೇಂದ್ರ ಚಾಹಲ್ 22ನೇ ಸ್ಥಾನ, ಭುವನೇಶ್ವರ್ ಕುಮಾರ್ 24ನೇ ಸ್ಥಾನ, ಮಹಮ್ಮದ್ ಶಮಿ 25 ನೇ ಹಾಗೂ ರವೀಂದ್ರ ಜಡೇಜಾ 27ನೇ ಸ್ಥಾನದಲ್ಲಿದ್ದಾರೆ.