ಕೊರೊನಾ ಎಫೆಕ್ಟ್ ನಿಂದ ದೇಶ ಲಾಕ್ ಡೌನ್ ಆಗಿ ಸಾಕಷ್ಟು ಜನ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ಕಾರ್ಮಿಕರಿಗೆ ನೆರವಾಗಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಪಿ.ಎಂ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ದೇಶಕ್ಕೆ ನಾಳೆ ಒಳ್ಳೆಯದಾಗಲು ಇಂದು ಜನ ತ್ಯಾಗಗಳನ್ನು ಮಾಡುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ದೇಶದ ಎಲ್ಲಾ ಕಡೆ ಬಸ್, ರೈಲು,ವಾಹನಗಳ ಸಂಚಾರ ಬಂದ್ ಆಗಿದೆ. ಇದರಿಂದ ಮಹಾನಗರಗಳಲ್ಲಿ ಇರುವ ಲಕ್ಷಾಂತರ ಕಾರ್ಮಿಕರು, ನೂರಾರು ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿಯೇ ನಡೆದು ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದಾರೆ. ಕಳಕಳಿಯಿಂದ ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. ದಯವಿಟ್ಟು ಈ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಸಹಾಯ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಿ. ಅಲ್ಲದೆ ನಡೆದುಕೊಂಡು ಸಾಗುತ್ತಿರುವ ಜನರಿಗೆ ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸಿ, ಆಶ್ರಯತಾಣಗಳಲ್ಲಿ ಅನ್ನ ನೀರು ಇಲ್ಲದೆ ಪರದಾಡುತ್ತಿರುವ ಜನಕ್ಕೆ ಆಯಾ ಜಿಲ್ಲಾಡಳಿತದ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸೋನಿಯಾಗಾಂಧಿ ಪ್ರಧಾನಿಯವರನ್ನು ಮನವಿ ಮಾಡಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದತ್ತ ನಡೆದು ಹೊರಟ ಕಾರ್ಮಿಕರ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಟ್ವೀಟ್ ಮಾಡಿರುವ ಅವರು, ವಿದೇಶದಲ್ಲಿರುವ ಭಾರತೀಯರ ರಕ್ಷಣೆಗೆ ವಿಮಾನವನ್ನೆ ಕಳುಹಿಸುತ್ತೇವೆ. ಆದರೆ ಇಲ್ಲೆ ಇರುವ, ನಮಗಾಗಿ ದುಡಿಯುವ ಜನಕ್ಕೆ ನಾವ್ಯಾಕೆ ಯಾವುದೇ ಸೌಲಭ್ಯ ಕೊಡಲಾಗುತ್ತಿಲ್ಲ. ಇದು ನಮ್ಮ ಜವಾಬ್ದಾರಿಯಲ್ಲವೆ? ಇಷ್ಟರಮಟ್ಟಿಗೆ ಹೊಣೆಯನ್ನು ನಾವುಗಳು ಹೊರಲೇಬೇಕಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಪಕ್ಷ ಭೇದ ಮರೆತು ನೌಕರರಿಗೆ ಸಹಾಯ ಮಾಡಬೇಕು. ಜೊತೆ ಸರ್ಕಾರವು ಸಹ ಅವರ ನೆರವಿಗೆ ಮುಂದಾಗಬೇಕು ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.








