ಗಮನವಿಟ್ಟು ಕೇಳಿ.. ಜನ ಸಾಮಾನ್ಯರು ಬೀದಿಗೆ ಇಳಿದು ಹೋರಾಟ ಮಾಡೋ ಸಮಯ ಬಂದಿದೆ..!
ಕರುನಾಡಿನಲ್ಲಿ ಜನ ಸಾಮಾನ್ಯರೇ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಕೊರೋನಾ ಆತಂಕ…ಆರ್ಥಿಕವಾಗಿ ಮಾನಸಿಕವಾಗಿ ಕಂಗೆಟ್ಟಿರುವ ಜನ ಸಾಮಾನ್ಯರಿಗೆ ಸಾಲು ಸಾಲು ಬಂದ್‍ಗಳು, ಪ್ರತಿಭಟನೆಗಳು, ಹೋರಾಟಗಳಿಂದ ರೋಸಿ ಹೋಗಿದ್ದಾರೆ.
ಹೌದು, ಸರ್ಕಾರದ ಕೆಲವೊಂದು ಆತುರದ ನಿರ್ಧಾರಗಳಿಂದ ಪ್ರತಿಭಟನೆ ಹೋರಾಟ ನಡೆಯುವುದು ಸಹಜ. ಆದ್ರೆ ನಾವು ಯಾವ ಸ್ಥಿತಿಯಲ್ಲಿ ಇದ್ದೇವೆ ಅನ್ನೋದನ್ನು ನೋಡಬೇಕಾಗುತ್ತದೆ.
ಮರಾಠ ಅಭಿವೃದ್ದಿ ನಿಗಮ ಸ್ಥಾಪನೆಯ ವಿರುದ್ಧ ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆಕೊಟ್ಟಿದ್ದವು. ಆದಾದ ನಂತರ ರೈತರ ಪ್ರತಿಭಟನೆ.. ಭಾರತ ಬಂದ್ ಮತ್ತು ಕರ್ನಾಟಕ ಬಂದ್.. ಅದು ಮುಗಿದ ತಕ್ಷಣ ಈಗ ಸಾರಿಗೆ ನೌಕರರ ಪ್ರತಿಭಟನೆ..
ಕಳೆದ ಏಳೆಂಟು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳಿಂದ ರೋಸಿಹೋಗಿದ್ದು ಮಾತ್ರ ಜನ ಸಾಮಾನ್ಯರು. ಮೊದಲೇ ಆರ್ಥಿಕವಾಗಿ ಕಂಗೆಟ್ಟಿರುವ ಜನ ಸಾಮಾನ್ಯರಿಗೆ ಈ ಬಂದ್, ಪ್ರತಿಭಟನೆಗಳಿಂದ ಸಿಡಿಮಿಡಿಗೊಳ್ಳುವ ಕಾಲ ಕೂಡ ಬಂದಿದೆ.
ರಾಜಕಾರಣಿಗಳ ಮತ್ತು ಸಂಘ ಸಂಸ್ಥೆಗಳ ಸ್ವಪ್ರತಿಷ್ಠೆಯಿಂದಾಗಿ ತೊಂದರೆಯಾಗುತ್ತಿರುವುದು ಮಾತ್ರ ಜನರಿಗೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನರೇ ದಂಗೆ ಏದ್ರೂ ಅಚ್ಚರಿ ಏನಿಲ್ಲ.
ಒಂದಂತೂ ಸತ್ಯ, ಪ್ರತಿಭಟನೆ, ಹೋರಾಟ ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರುವುದು ಪ್ರತಿಯೊಬ್ಬರ ಹಕ್ಕು ಕೂಡ. ಇದನ್ನು ಯಾರು ಕೂಡ ಪ್ರಶ್ನೆ ಮಾಡುವಂಗಿಲ್ಲ. ಆದ್ರೆ ಸಮಯ, ಸಂದರ್ಭ, ಪರಿಸ್ಥಿತಿಯನ್ನು ಕೂಡ ಅರಿತುಕೊಳ್ಳಬೇಕು.
ಕಳೆದ ಎಂಟು ಹತ್ತು ತಿಂಗಳುಗಳಿಂದ ಜನರಿಗೆ ಎಷ್ಟು ತೊಂದರೆಯಾಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಒಂದು ಹೊತ್ತಿನ ಊಟಕ್ಕೂ ಎಷ್ಟು ಒದ್ದಾಟ ನಡೆಸಬೇಕಾಯ್ತು ಅಂತ ಅದನ್ನು ಅನುಭವಿಸಿದವರಿಗೆ ಗೊತ್ತು.
ಇನ್ನು ಹೋರಾಟದ ಮುಂಚೂಣಿಯಲ್ಲಿರು ನಾಯಕ ಕೋಡಿಹಳ್ಳಿ ಚಂದ್ರ ಶೇಖರ್ ಅವರು ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರ ಶೇಖರ್ ಅವರಿಗೆ ರೈತರ ಸಮಸ್ಯೆಗಳನ್ನೇ ಬಗೆ ಹರಿಸಲು ಸಾಧ್ಯವಾಗಿಲ್ಲ. ಇದೀಗ ಸಾರಿಗೆ ನೌಕರರ ಸಮಸ್ಯೆಯನ್ನು ಬಗೆ ಹರಿಸುತ್ತಾರೆ ಅನ್ನೋ ಪ್ರಶ್ನೆಗಳು ಕೇಳಿಬರುತ್ತಿವೆ.
ಅದೇನೇ ಇರಲಿ, ಪ್ರತಿಭಟನೆಗೆ ಬೆಂಬಲ ನೀಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದ್ರೆ ಕೋಡಿ ಹಳ್ಳಿ ಚಂದ್ರ ಶೇಖರ್ ಅವರಿಗೊಂದು ಪ್ರಶ್ನೆ ಇದೆ. ಸರ್ಕಾರಿ ನೌಕರರಿಗೆ ಬೆಂಬಲ ನೀಡುವುದು ಸರಿ ಓಕೆ. ಒಪ್ಪಿಕೊಳ್ಳೋಣ. ಆದ್ರೆ ನೆರೆ, ಪ್ರವಾಹ ಹೀಗೆ ರೈತರ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಪರಿಹಾರ ನೀಡಲು ಯಶಸ್ವಿಯಾಗಿದ್ದಾರೆ. ಹಳ್ಳಿ ಪ್ರದೇಶದ ರೈತರಿಗೆ ನಮ್ಮ ರೈತ ಸಂಘಟನೆಗಳಿಂದ ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವುದು ಯಾರು ?
ಅದೆಲ್ಲಾ ಇರಲಿ, ಸಾರಿಗೆ ನೌಕರರ ಪ್ರತಿಭಟನೆಯನ್ನೇ ಮುಂದಿಟ್ಟುಕೊಳ್ಳೋಣ. ಈ ಪ್ರತಿಭಟನೆಯಿಂದ ರಾಜ್ಯದ ಗ್ರಾಮೀಣ ಭಾಗದ ರೈತರಿಗೆ ತೊಂದರೆಯಾಗಿಲ್ವಾ ? ಕೂಲಿ ಕಾರ್ಮಿಕರಿಗೆ ತೊಂದರೆಯಾಗಿಲ್ವಾ ? ದಿನ ನಿತ್ಯ ಕೆಲಸ ಮಾಡುವ ಅದೆಷ್ಟು ಮಂದಿ ನೌಕಕರಿಗೆ ತೊಂದರೆಯಾಗಿಲ್ವಾ ?
ಪ್ರತಿಭಟನೆಯ ರಾಜಕೀಯದಾಟದಲ್ಲಿ ಜನ ಸಾಮಾನ್ಯರ ತೊಂದರೆಗಳಿಗೆ ಪರಿಹಾರ ನೀಡುವವರು ಯಾರು ? ಸರ್ಕಾರ ಮತ್ತು ರಾಜಕೀಯ ಪಕ್ಷಗಳು, ಜನ ನಾಯಕರು ಎಲ್ಲಾ ಸಭೆ, ಸಂಧಾನ ಸಭೆ ಹಾಗೂ ಪರೋಕ್ಷ ವಾಗ್ದಾಳಿಗಳ ಮೂಲಕ ತಮ್ಮ ತೀಟೆಯನ್ನು ತೀರಿಸಿಕೊಳ್ಳುತ್ತಿದ್ದಾರೆ. ಆದ್ರೆ ಪ್ರತಿ ದಿನ ಕೂಲಿ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಯಾರು ಕೊಡುತ್ತಾರೆ ?
ಅಷ್ಟೇ ಅಲ್ಲ, ಇದೀಗ ಇದೇ ಪ್ರತಿಭಟನೆಯನ್ನು ಮಂದಿಟ್ಟುಕೊಂಡು ಖಾಸಗಿ ಬಸ್ ಮಾಲೀಕರ ಸಂಘ, ಮತ್ತೊಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬಂದ್ ಮತ್ತು ಪ್ರತಿಭಟನೆ ನಡೆಸಲು ಯೋಜನೆ ರೂಪಿಸುತ್ತಿವೆ.
ಒಟ್ಟಿನಲ್ಲಿ ಈ ಎಲ್ಲಾ ವಿಚಾರಗಳನ್ನು ನೋಡಿದಾಗ ಮತ್ತು ಗಮನಿಸಿದಾಗ ಈ ಪ್ರತಿಭಟನೆ, ಬಂದ್ ಹಿಂದೆ ರಾಜಕೀಯ ಲೆಕ್ಕಚಾರಗಳೂ ಇವೆ. ರಾಜಕೀಯ ಪಕ್ಷಗಳ ಕೈವಾಡವೂ ಇದೆ ಎಂಬುದು ಗುಟ್ಟಾಗಿ ಏನು ಉಳಿದಿಲ್ಲ.
ಒಟ್ಟಿನಲ್ಲಿ ಕರುನಾಡಿನಲ್ಲಿ ಇದೇ ರೀತಿ ಪ್ರತಿಭಟನೆ ನಡೆದ್ರೆ ಕೊನೆಗೂ ಸರ್ಕಾರ ಮತ್ತು ಸಂಘಟನೆಗಳ ವಿರುದ್ಧ ಜನ ಸಾಮಾನ್ಯರು ತಿರುಗಿ ಬೀಳುವ ದಿನ ದೂರವಿಲ್ಲ ಅನ್ಸುತ್ತೆ.