ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಚಿಕ್ಕಬಳ್ಳಾಪುರದಲ್ಲಿ ಕೊರೊನಾಸುರ ತನ್ನ ಕಬಂದ ಬಾಹುಗಳನ್ನು ಮತ್ತಷ್ಟು ಚಾಚಿದ್ದಾನೆ. ಕೊರೊನಾ ಸೋಂಕಿನಿಂದ ಗೌರಿಬಿದನೂರಿನ ಒಬ್ಬ ವೃದ್ಧೆ ಬಲಿಯಾಗಿ, ಮೂವರು ಜೀವನ್ಮರಣದ ಹೋರಾಟ ನಡೆಸಿರುವಾಗಲೇ, ಮತ್ತೆ ಐವರಲ್ಲಿ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿದ್ದು, ಜಿಲ್ಲೆಯ ಜನರಲ್ಲಿ ತಲ್ಲಣ ಮೂಡಿಸಿದೆ.
ಕಳೆದ ತಿಂಗಳು ಮೆಕ್ಕಾ ಯಾತ್ರೆ ಮುಗಿಸಿ ಮಾರ್ಚ್ ಎರಡನೇ ವಾರದಲ್ಲಿ ಗೌರಿಬಿದನೂರಿಗೆ ಬಂದಿದ್ದ ನಾಲ್ವರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿತ್ತು. ಈ ಪೈಕಿ ಗೌರಿಬಿದನೂರಿನಲ್ಲಿ ಮಗನ ಮನೆಯಲ್ಲಿ ಗೃಹ ಬಂಧನದಲ್ಲಿದ್ದ ನೆರೆಯ ಆಂಧ್ರಪ್ರದೇಶದ ಹಿಂದೂಪುರ ತಾಲೂಕಿಗೆ ಸೇರಿದ ಮಹಿಳೆ ಮಾರ್ಚ್ 25 ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಮೊದಲು ದೃಢಪಟ್ಟ ಮೂರು ಪ್ರಕರಣಗಳ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 22 ಜನರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತ್ಯೇಕ ಗೃಹ ಬಂಧನಕ್ಕೆ ಒಳಪಡಿಸಿ, ಅವರ ಗಂಟಲ ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ನಿನ್ನೆ ಪ್ರಯೋಗಾಲಯದಿಂದ ವರದಿ ಬಂದಿದ್ದು, ಐವರಲ್ಲಿ ಕೋವಿಡ್ 19 ಲಕ್ಷಣಗಳು ಇರುವುದು (ಪಾಸಿಟಿವ್) ಪತ್ತೆಯಾಗಿದೆ. ಇನ್ನು ಇಬ್ಬರಲ್ಲಿ ಸೋಂಕು ಇರುವ ಶಂಕೆ ಇದ್ದು, ಅದು ಇಂದು ಬರುವ ವರದಿಯಲ್ಲಿ ದೃಢವಾಗಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.








