ಮುಷ್ತಾಕ್ ಆಲಿ ಟಿ-ಟ್ವೆಂಟಿಯಲ್ಲಿ ಆಡಲಿರುವ ಯುವಿ, ಶ್ರೀಶಾಂತ್, ರೈನಾ
ದೇಸಿ ಕ್ರಿಕೆಟ್ ಟೂರ್ನಿ 2021ರ ಜನವರಿ 10ರಿಂದ ಆರಂಭವಾಗಲಿದೆ. ಸಯ್ಯದ್ ಮುಷ್ತಾಕ್ ಆಲಿ ಟಿ-ಟ್ವೆಂಟಿ ಟೂರ್ನಿ ಆಯೋಜನೆ ಮಾಡಲು ಬಿಸಿಸಿಐ ಮುಹೂರ್ತ ಕೂಡ ಫಿಕ್ಸ್ ಮಾಡಿದೆ.
ಒಟ್ಟು 38 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು. ಭಾರತದ ಆರು ತಾಣಗಳಲ್ಲಿ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಜೈವಿಕ ಸುರಕ್ಷತೆಯಡಿಯಲ್ಲಿ ಟೂರ್ನಿ ನಡೆಯಲಿದೆ.
ಈಗಾಗಲೇ ರಾಜ್ಯ ತಂಡಗಳು ಸಿದ್ಧವಾಗುತ್ತಿವೆ. ಪಂಜಾಬ್, ಕೇರಳ ಮತ್ತು ಉತ್ತರ ಪ್ರದೇಶ ತಂಡಗಳ ಸಂಭಾವನೀಯ ತಂಡಗಳನ್ನು ಆಯ್ಕೆ ಮಾಡಲಾಗಿದೆ.
ಈ ನಡುವೆ ಕೇರಳ ತಂಡದಲ್ಲಿ ವೇಗಿ ಶ್ರೀಶಾಂತ್ ಸಂಭವನೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಶ್ರೀಶಾಂತ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡಬೇಕು ಅನ್ನೋ ಆಸೆಯಲ್ಲಿದ್ದಾರೆ. ಇದೀಗ ಶಿಕ್ಷೆಯ ಅವಧಿಯ ಮುಗಿದಿದ್ದು ಕೇರಳ ತಂಡದ ಪರ ಶ್ರೀಶಾಂತ್ ಆಡಲಿದ್ದಾರೆ.
ಕೇರಳ ತಂಡದಲ್ಲಿ ಸಂಜು ಸಾಮ್ಸನ್, ರಾಬಿನ್ ಉತ್ತಪ್ಪ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದ ಯುವರಾಜ್ ಸಿಂಗ್ ಕೂಡ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದಾರೆ. ದೇಶಿ ಕ್ರಿಕೆಟ್ ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯುವ ರಾಜ್ ಸಿಂಗ್ ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ 39ರ ಹರೆಯದ ಯುವರಾಜ್ ಸಿಂಗ್ ಅವರು ಪಂಜಾಬ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ಇನ್ನೊಂದೆಡೆ ಕಳೆದ ಆಗಸ್ಟ್ 15ರಂದು ಸುರೇಶ್ ರೈನಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದರು. ಆನಂತರ ಐಪಿಎಲ್ ಟೂರ್ನಿಯಿಂದ ಹೊರಬಂದಾಗ ಸಾಕಷ್ಟು ವಿವಾದ, ಆರೋಪಗಳಿಗೂ ಗುರಿಯಾಗಿದ್ದರು.
ಇದೀಗ ಸುರೇಶ್ ರೈನಾ ಅವರು ಮುಷ್ತಾಕ್ ಆಲಿ ಟಿ-ಟ್ವೆಂಟಿ ಟೂರ್ನಿಯಲ್ಲಿ ಉತ್ತರ ಪ್ರದೇಶದ ಪರ ಕಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶ ಸಂಭವನೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ಫೆಬ್ರವರಿ ನಂತರ ಭಾರತದಲ್ಲಿ ಯಾವುದೇ ದೇಶಿ ಕ್ರಿಕೆಟ್ ಟೂರ್ನಿಗಳು ನಡೆದಿರಲಿಲ್ಲ. ಕೋವಿಡ್ ನಿಂದಾಗಿ ಅಂತಾರಾಷ್ಟ್ರೀಯ ಸರಣಿ, ಐಪಿಎಲ್, ದೇಸಿ ಟೂರ್ನಿಗಳು ನಡೆದಿರಲಿಲ್ಲ. ಐಪಿಎಲ್ ಟೂರ್ನಿಯನ್ನು ಮಾತ್ರ ದುಬೈ ನಲ್ಲಿ ಆಯೋಜನೆ ಮಾಡಲಾಗಿತ್ತು.
ಒಟ್ಟಿನಲ್ಲಿ 2021ರಲ್ಲಿ ಭಾರತದಲ್ಲಿ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ನಿಧಾನವಾಗಿ ಕೋವಿಡ್ ಆತಂಕ ಕೂಡ ದೂರವಾಗುತ್ತಿದೆ.