ಕೋರಮಂಗಲ ಮೇಲ್ಸೇತುವೆ ಕಾಮಗಾರಿ ಶೀಘ್ರ ಮುಗಿಸುವಂತೆ ಆಪ್ ಪ್ರೊಟೆಸ್ಟ್
ಕೋರಮಂಗಲ ಮೇಲ್ಸೇತುವೆ ಕಾಮಗಾರಿ ಶೀಘ್ರ ಮುಗಿಸುವಂತೆ ಆಗ್ರಹಿಸಿ ಟೀ, ಪಕೋಡ ಹಾಗೂ ಟಿಕೆಟ್ ಮಾರುವುದರ ಮೂಲಕ ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು ನಿವಾಸಿಗಳು ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಸೋನಿ ವಲ್ರ್ಡ್ ವೃತ್ತದ ಬಳಿ ಶುಕ್ರವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರನ್ನುಪೊಲೀಸರು ಬಂಧಿಸಿದರು.
ನಗರದ ಅತಿ ದೊಡ್ಡ ಎರಡನೇ ಮೇಲ್ಸೇತುವೆ ಎಂದು ಮಂಕುಬೂದಿ ಎರಚಿ ಪ್ರಾರಂಭಿಸಿದ ಕೋರಂಮಗಲ ಎಲಿವೇಟೆಡ್ ಮೇಲ್ಸೇತುವೆ ಕಾಮಗಾರಿ 4 ವರ್ಷ ಕಳೆದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ಕಾರಣ ಇದನ್ನು ಬೃಹತ್ ಬೆಂಗಳೂರಿನ ಬೃಹತ್ ಭ್ರಷ್ಟಾಚಾರದ ಸ್ಮಾರಕವಾಗಿ ಘೋಷಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದರು.
ಶುಕ್ರವಾರ ನಡೆದ ಕೋರಮಂಗಲ ಮೇಲ್ಸೇತುವೆ ಕಾಮಗಾರಿ ಶೀಘ್ರ ಮುಗಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಕೋರಮಂಗಲ 100 ಅಡಿ ಮುಖ್ಯರಸ್ತೆಯಿಂದ ಈಜೀಪುರ ಮುಖ್ಯರಸ್ತೆ – ಒಳವರ್ತುಲ ರಸ್ತೆ ಜಂಕ್ಷನಿಂದ ಕೇಂದ್ರಿಯ ಸದನ ಜಂಕ್ಷನ್ ತನಕ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು 2.4 ಕಿಮೀ ಉದ್ದವಿದೆ. ನಗರೋಥ್ಥಾನ ಯೋಜನೆ ಅಡಿ 203.20 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ಮೇಲ್ಸೇತುವೆ ಕಾಮಗಾರಿಯನ್ನು 2017 ಜುಲೈ ಉದ್ಘಾಟಿಸಲಾಯಿತು. 2019 ಕ್ಕೆ ಮುಗಿಯಬೇಕಾದ ಕಾಮಗಾರಿ ಇನ್ನೂ ಮುಗಿದಿಲ್ಲ.
203 ಕೋಟಿಯಲ್ಲಿ ಎಷ್ಟು ಖರ್ಚಾಗಿದೆ ಎಂಬುದು ಯಾರ ಬಳಿಯೂ ಮಾಹಿತಿ ಇಲ್ಲ, ಬೇಕಾದಾಗ ಬಂದು ಏನು ಬೇಕಾದರೂ ತಿಂದು ಹೋಗಲು ಇದು ಮಾವನ ಮನೆಯೇ ಎಂದು ಪ್ರಶ್ನಿಸಿದರು.
ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಬೃಹತ್ ಭ್ರಷ್ಟಾಚಾರದ ಸ್ಮಾರಕಗಳ ಬಳಿ ಟೀ ಅಂಗಡಿ, ಪಕೋಡ ಹಾಗೂ ಸ್ಮಾರಕ ವೀಕ್ಷಿಸಲು ಟಿಕೆಟ್ ಮಾರಾಟ ಮಾಡಿ ಆ ಹಣವನ್ನು ಕಾಮಗಾರಿ ನಿಧಿಗೆ ಕೊಡಲಾಗುವುದು ಎಂದರು.
ಕೋರಮಂಗಲದ ನಿವಾಸಿಗಳು ದಿನನಿತ್ಯ ಸಂಚಾರ ದಟ್ಟಣೆಯಿಂದ ನರಕ ಅನುಭವಿಸುತ್ತಿದ್ದಾರೆ. ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ಮಾಧ್ಯಮಗಳ ಮುಂದೆ ಆಗಾಗ ಕಾಣಿಸಿಕೊಂಡು ಬಾಯಿ ಚಪಲದ ಮಾತುಗಳನ್ನಾಡುತ್ತಿದ್ದಾರೆ ಹೊರತು ಕಾಮಗಾರಿ ಮುಗಿಸಲು ಒತ್ತಡ ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್, ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel