ಚೆನ್ನೈ: ದೇಶದಲ್ಲಿ ಕೊರೊನಾ ಸೋಂಕು ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದು, ಕೇಂದ್ರ, ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿವೆ. ಜೊತೆಗೆ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಿವೆ. ಇದೆಲ್ಲಾ ಒಂದು ಕಡೆಯಾದ್ರೆ ಕೊರೊನಾ ವೈರಸ್ ಸಾಂಕ್ರಾಮಿಕವಾಗುತ್ತಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚೆನ್ನೈನಲ್ಲಿ ಪೊಲೀಸ್ ಅಧಿಕಾರಿ ‘ಕೊರೊನಾ ಹೆಲ್ಮೆಟ್’ ಧರಿಸಿ ರಸ್ತೆಗಿಳಿದಿದ್ದಾರೆ.

ಹೌದು..! ದೇಶದಾದ್ಯಂತ ಲಾಕ್ ಡೌನ್ ಇದ್ದರೂ ಜನರು ಸುಖಾಸುಮ್ಮನೆ ಓಡಾಡುತ್ತಲೇ ಇದ್ದಾರೆ. ಇದನ್ನು ತಡೆಯುವ ಹಾಗೂ ಕೊರೊನಾ ಹರಡುವ ಬಗ್ಗೆ ಜಾಗೃತಿ ನೀಡುವ ಉದ್ದೇಶದಿಂದ ಚೆನ್ನೈ ಪೊಲೀಸರು ಕೊರೊನಾ ಹೆಲ್ಮೆಟ್ ಧರಿಸಿ ಜನರಿಗೆ ಮಾಹಿತಿ ನೀಡುತ್ತಿದ್ದಾರೆ.
ಗೌತಮ್ ಎಂಬ ಕಲಾವಿದ ಈ ಹೆಲ್ಮೆಟ್ ವಿನ್ಯಾಸಗೊಳಿಸಿದ್ದಾರೆ. ‘ಕೋವಿಡ್-19 ಬಗ್ಗೆ ಜನರು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಜನರನ್ನು ನಿಯಂತ್ರಿಸಲು ಸಹಕಾರಿಯಾಗಲೆಂದು ಹಳೆಯ ಹೆಲ್ಮೆಟ್ ಮತ್ತು ಪೇಪರ್ ಬಳಸಿ ಕೊರೊನಾ ಹೆಲ್ಮೆಟ್ ಸಿದ್ಧಪಡಿಸಿದೆ. ಇದರೊಂದಿಗೆ ಜಾಗೃತಿ ಸಂದೇಶಗಳಿರುವ ಪ್ಲಕಾರ್ಡ್‌ಗಳನ್ನೂ ರೂಪಿಸಿ ಪೊಲೀಸರಿಗೆ ನೀಡಿದ್ದೇನೆ ‘ ಎಂದು ಹೇಳಿದ್ದಾರೆ.