ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೆಮ್ಮಾರಿ ಕೊರೊನಾ ನಿಯಂತ್ರಣ ಕ್ರಮಕ್ಕಾಗಿ ದೇಶದ ಜನರು ಕೈಜೋಡಿಸಿ, ಹಣಕಾಸಿನ ನೆರವನ್ನು ನೀಡುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೆ ರಾಷ್ಟ್ರದ ಪ್ರಖ್ಯಾತ ಉದ್ಯಮಿ ಮತ್ತು ಟಾಟಾ ಗ್ರೂಪ್ ಚೇರ್ಮನ್ ರತನ್ ಟಾಟಾ ಅವರು ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು 500 ಕೋಟಿ ರೂ. ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮಾನವ ಜನಾಂಗ ಎದುರಿಸುತ್ತಿರುವುದರಲ್ಲಿ ಕೋವಿಡ್ -19 ಬಿಕ್ಕಟ್ಟು ಅತಿದೊಡ್ಡ ಸವಾಲಾಗಿದೆ. ಹೀಗಾಗಿ ಟಾಟಾ ಟ್ರಸ್ಟ್ ಮತ್ತು ಟಾಟಾ ಗ್ರೂಪ್ ಕಂಪನಿಗಳು ರಾಷ್ಟ್ರದ ಜತೆಗೆ ನಿಲ್ಲಲಿದೆ ಎಂದು 500 ಕೋಟಿ ರೂ. ನೆರವು ಘೋಷಿಸಿರುವ ಪತ್ರವೊಂದನ್ನು ಪೋಸ್ಟ್ ಮಾಡಿ ರತನ್ ಟಾಟಾ ಅವರು ಟ್ವೀಟ್ ಮಾಡಿದ್ದಾರೆ.
ಸೋಂಕಿಗೆ ಗುರಿಯಾದ ಸಮುದಾಯವನ್ನು ರಕ್ಷಿಸಲು ಹಾಗೂ ಸಶಕ್ತಗೊಳಿಸಲು ಪ್ರಮುಖ 5 ಅಂಶಗಳ ಮೇಲೆ 500 ಕೋಟಿ ರೂ. ನೀಡಲು ಬದ್ಧರಾಗಿದ್ದೇವೆ ಎಂದು ರತನ್ ಟಾಟಾ ತಿಳಿಸಿದ್ದಾರೆ.
1. ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ) ಒದಗಿಸುವುದು.
2. ಏರಿಕೆಯಾಗುತ್ತಿರುವ ಕರೊನಾ ಪ್ರಕರಣಗಳ ಚಿಕಿತ್ಸೆಗಾಗಿ ಉಸಿರಾಟ ವ್ಯವಸ್ಥೆಗಳನ್ನು ಪೂರೈಸುವುದು.
3. ತಲಾ ಪರೀಕ್ಷೆಯನ್ನು ಹೆಚ್ಚಿಸಲು ಟೆಸ್ಟಿಂಗ್ ಕಿಟ್ಸ್ ಗಳನ್ನು ವಿತರಿಸುವುದು.
4. ಸೋಂಕಿತ ರೋಗಿಗಳ ಚಿಕಿತ್ಸೆಗಾಗಿ ಮಾಡ್ಯುಲರ್ ಟ್ರೀಟ್‌ಮೆಂಟ್ ಸೌಲಭ್ಯಗಳ ಅಳವಡಿಕೆ.
5. ಬೌದ್ಧಿಕ ನಿರ್ವಹಣೆ ಮತ್ತು ಆರೋಗ್ಯ ಸಿಬ್ಬಂದಿಯ ತರಬೇತಿ ಮತ್ತು ಸಾಮಾನ್ಯ ಜನರ ಸೇವೆ.
ಈ ಮೇಲಿನ ಐದು ಏರಿಯಾಗಳಿಗೆ ಹಣಕಾಸಿನ ನೆರವನ್ನು ರತನ್ ಟಾಟಾ ಅವರು ನೀಡಲಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 900ರ ಸಮೀಪಕ್ಕೆ ಬಂದಿದ್ದು, ಒಟ್ಟು 21 ಮಂದಿ ಬಲಿಯಾಗಿದ್ದಾರೆ.
ನೀವು ಕೊರೊನಾ ನಿಯಂತ್ರಣಕ್ಕೆ ಮುಖ್ಯಮಂತ್ರಿ ನಿಧಿ, ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿ ಕೈಜೋಡಿಸಿ.