ಕೋವಿಡ್ -19 ಸೋಂಕು ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅಗತ್ಯವಿರುವುದರಿಂದ ಸಾರ್ವಜನಿಕರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ನಾಳೆಯೂ ಕೂಡ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಬಗ್ಗೆ ಮಾಹಿತಿಗಳನ್ನು ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರವೂ ಸಂಪೂರ್ಣ ಬಂದ್ ಮುಂದುವರಿಯಲಿದ್ದು, ಎಲ್ಲಾ ಚಟುವಟಿಕೆ, ವಾಣಿಜ್ಯ ವ್ಯವಹಾರ, ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹಾಲು ವಿತರಣೆಗೆ ರಿಯಾಯಿತಿ ಇದ್ದು, ಮನೆ ಮನೆಗೂ ವಿತರಕರು ಹಾಲು ಹಾಕುತ್ತಾರೆ. ಮನೆಯಿಂದ ಯಾರೂ ಹೊರ ಬರುವಂತಿಲ್ಲ. ಔಷಧಾಲಯ ತೆರೆದಿರಲಿದ್ದು, ಔಷಧ ಖರೀದಿಗೆ ನಿಗದಿತ ಕಾರಣ ಇದ್ದರೆ ಮಾತ್ರ ಅನುಮತಿಯಿದೆ. ಸಿಲಿಂಡರ್ ಪೂರೈಕೆ, ಪೆಟ್ರೋಲ್ ಬಂಕ್ ಗಳು ತೆರೆದಿರಲಿದೆ. ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ತೊಂದರೆಯಿಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಲಾಕ್ ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿರುವ ಕಾರ್ಮಿಕರಿಗೆ, ನಿರ್ಗತಿಕರಿಗೆ ಶಾಲೆ/ ಹಾಸ್ಟೆಲ್ ನಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಎಲ್ಲಾದರೂ ಜನ ಸಂಕಷ್ಟದಲ್ಲಿದ್ದರೆ 1077 ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಿ ಎಂದು ಹೇಳಿದ ಸಚಿವರು, ಆ್ಯಪ್ ಮೂಲಕ ದಿನಸಿ ಸಾಮಾಗ್ರಿ, ಡೋರ್ ಡೆಲಿವರಿ ಮಾಡುವ ಯೋಜನೆಯ ಬಗ್ಗೆಯೂ ಚಿಂತನೆ ಮಾಡಿರುವುದಾಗಿ ತಿಳಿಸಿದ್ದಾರೆ.