ಐಪಿಎಲ್ ಅಂಗಳಕ್ಕೂ ಎಂಟ್ರಿ ಕೊಡಲಿದ್ದಾರಾ ಗೌತಮ್ ಅದಾನಿ..!
ಭಾರತೀಯ ಕ್ರಿಕೆಟ್ ನಿಯಂತ್ರಣ ವಾರ್ಷಿಕ ಮಹಾಸಭೆ ಡಿಸೆಂಬರ್ 24ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ.
ಬಿಸಿಸಿಐ ಮಹತ್ವದ ವಾರ್ಷಿಕ ಸಭೆಯಲ್ಲಿ ಐಪಿಎಲ್ ನ ಹತ್ತು ತಂಡಗಳಿಗೆ ಅನುಮೋದನೆ ಸಿಗಲಿದೆ.
ಈಗಾಗಲೇ ಐಪಿಎಲ್ ನಲ್ಲಿ ಎಂಟು ತಂಡಗಳಿವೆ. ಇನ್ನು ಎರಡು ತಂಡಗಳು ಸೇರಿಕೊಳ್ಳಲಿವೆ. ಆದ್ರೆ ಈ ಎರಡು ತಂಡಗಳು 2021ರ ಐಪಿಎಲ್ ನಲ್ಲಿ ಆಡುವುದು ಅನುಮಾನವಾಗಿದೆ. ಹೀಗಾಗಿ 2022ರ ಐಪಿಎಲ್ ನಲ್ಲಿ ಹತ್ತು ತಂಡಗಳು ಸ್ಪರ್ಧಿಸುವ ಸಾಧ್ಯತೆಗಳಿವೆ.
2021ರ ಐಪಿಎಲ್ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿದೆ. ಹೀಗಾಗಿ ಹೆಚ್ಚುವರಿಯಾಗಿ ಸೇರ್ಪಡೆಯಾಗುವ ಎರಡು ತಂಡಗಳಿಗೆ ತಂಡವನ್ನು ಕಟ್ಟಲು ಸಮಯದ ಅಭಾವವಾಗಬಹುದು. ಇದ್ರಿಂದ 10 ಹತ್ತು ತಂಡಗಳ ಐಪಿಎಲ್ ಟೂರ್ನಿ 2022ಕ್ಕೆ ಕಾರ್ಯ ರೂಪಕ್ಕೆ ಬರಲಿದೆ.
ಮೊದಲು ಎರಡು ತಂಡಗಳಿಗೆ ಟೆಂಡರ್ ಅನ್ನು ಕರೆಯಬೇಕು. ಆನಂತರ ಬಿಡ್ಡಿಂಗ್ ಪ್ರಕ್ರಿಯೆಯನ್ನು ಸಿದ್ಧಪಡಿಸಬೇಕು. ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರ ಟೆಂಡರ್ ಗೆದ್ರೆ, ಮಾರ್ಚ್ ನಲ್ಲಿ ಆಟಗಾರರ ಹರಾಜಿನ ಪ್ರಕ್ರಿಯೆ ನಡೆಯಲಿದೆ. ಇದ್ರಿಂದ ಪರಿಪೂರ್ಣವಾದ ತಂಡವನ್ನು ಕಟ್ಟಲು ಹೊಸ ಫ್ರಾಂಚೈಸಿಗಳಿಗೆ ಕಷ್ಟವಾಗಬಹುದು
ಅದು ಅಲ್ಲದೆ ಹತ್ತು ತಂಡಗಳ ಐಪಿಎಲ್ ಟೂರ್ನಿಯನ್ನು ಆಯೋಜಿಸಿದ್ರೆ ಪಂದ್ಯಗಳ ಸಂಖ್ಯೆ 94ಕ್ಕೆ ಏರಲಿದೆ. ಹಾಗೇ ಟೂರ್ನಿಯು ಎರಡುವರೆ ತಿಂಗಳು ಆಯೋಜನೆ ಮಾಡಬೇಕಾಗುತ್ತದೆ. ಇದ್ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಗಳಿಗೆ ತೊಂದರೆಯಾಗುತ್ತದೆ. ಅದು ಅಲ್ಲದೆ ವಿದೇಶಿ ಆಟಗಾರರ ಲಭ್ಯತೆಯನ್ನು ಪರಿಗಣಿಸಬೇಕಾಗುತ್ತದೆ.
ಇನ್ನೊಂದೆಡೆ ನೇರ ಪ್ರಸಾರದ ಹಕ್ಕಿನ ಬಗ್ಗೆಯೂ ಚರ್ಚೆ ಮಾಡಬೇಕಾಗುತ್ತದೆ. ಸದ್ಯ ಐಪಿಎಲ್ ಟೂರ್ನಿಯ ನೇರ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋಟ್ರ್ಸ್ ಪಡೆದುಕೊಂಡಿದೆ.
ಈ ನಡುವೆ, ಹೊಸ ತಂಡಗಳ ಖರೀದಿಗೆ ಉದ್ಯಮಿ ಗೌತಮ್ ಅದಾನಿ ಮತ್ತು ಸಂಜೀವ್ ಗೋಯೆಂಕಾ ಅವರು ಆಸಕ್ತಿ ವಹಿಸಿದ್ದಾರೆ ಅನ್ನೋ ಸುದ್ದಿ ಕೂಡ ಕೇಳಿ ಬರುತ್ತಿದೆ. ಸಂಜೀವ್ ಗೋಯೆಂಕಾ ಅವರು ಈ ಹಿಂದೆ ರೈಸಿಂಗ್ ಪುಣೆ ಸೂಪರ್ ಜಿಯಂಟ್ಸ್ ತಂಡದ ಮಾಲೀಕರಾಗಿದ್ದರು. ಹಾಗೇ ಅದಾನಿ ಗ್ರೂಪ್ ಈಗ ಕ್ರಿಕೆಟ್ ಅಂಗಣಕ್ಕೂ ಕಾಲಿಡುವ ದಿನಗಳು ಕೂಡ ಸನೀಹವಾಗುತ್ತಿದೆ.








