ಕ್ರಿಕೆಟ್ ಮೈದಾನದಲ್ಲೂ ಮಿಂಚು ಹರಿಸಿದ ಅಮಿತ್ ಶಾ ಮಗ ಜೈ ಶಾ
ಜೈ ಶಾ.. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮಗ. ಅಪ್ಪನ ಪ್ರಭಾವದಿಂದಲೇ ಜೈ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ನೇಮಕವಾಗಿರುವುದು ಅನ್ನೋದು ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಬಿಸಿಸಿಐ ಕಾರ್ಯದರ್ಶಿಯಾಗಿ ಜೈ ಶಾ ಅಧಿಕಾರಾವಧಿ ಮುಗಿದಿದ್ದು ಈಗ ನ್ಯಾಯಾಂಗದಲ್ಲೂ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಡಿಸೆಂಬರ್ 24ರಂದು ಬಿಸಿಸಿಐನ ವಾರ್ಷಿಕ ಮಹಾಸಭೆ ಕೂಡ ನಡೆಯುತ್ತಿದೆ.
ಈ ಸಭೆಗೆ ಮುನ್ನ ಬಿಸಿಸಿಐ ಪದಾಧಿಕಾರಿಗಳ ನಡುವೆ ಸೌರ್ಹಾರ್ದ ಕ್ರಿಕೆಟ್ ಪಂದ್ಯವೊಂದು ನಡೆದಿತ್ತು. ಅಧ್ಯಕ್ಷರ ಇಲೆವೆನ್ ಮತ್ತು ಕಾರ್ಯದರ್ಶಿ ಇಲೆವೆನ್ ತಂಡಗಳ ನಡುವಿನ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದು ಜೈ ಶಾ ಸಾರಥ್ಯದ ಕಾರ್ಯದರ್ಶಿ ಇಲೆವೆನ್ ತಂಡ.
ಮೊದಲು ಬ್ಯಾಟಿಂಗ್ ಮಾಡಿದ ಕಾರ್ಯದರ್ಶಿ ಇಲೆವೆನ್ ತಂಡ 12 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 128 ರನ್ ಗಳಿಸಿತ್ತು.
ಕಾರ್ಯದರ್ಶಿ ಇಲೆವೆನ್ ತಂಡದ ಪರ ಜೈದೇವ್ ಶಾ ಅವರು ಅಜೇಯ 38 ರನ್ ಸಿಡಿಸಿದ್ರು. ಇನ್ನೊಂದು ಕಡೆ ಎರಡು ದಶಕಗಳ ನಂತರ ಮತ್ತೆ ಮೈದಾನದಲ್ಲಿ ಬ್ಯಾಟ್ ಬೀಸಿದ ಮಹಮ್ಮದ್ ಅಜರುದ್ದೀನ್ ಏಳು ಬೌಂಡರಿಗಳ ಸಹಾಯದಿಂದ 37 ರನ್ ದಾಖಲಿಸಿದ್ರು. ಈ ಹಂತದಲ್ಲಿ ಗಾಯಗೊಂಡ ಅಜರ್ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿಕೊಂಡ್ರು.
ಇನ್ನು ಸವಾಲನ್ನು ಬೆನ್ನಟ್ಟಿದ್ದ ಅಧ್ಯಕ್ಷರ ಇಲೆವೆನ್ ತಂಡ 28 ರನ್ ಗಳ ಅಂತರದಿಂದ ಸೋಲು ಅನುಭವಿಸಿತ್ತು. ಅಧ್ಯಕ್ಷರ ಇಲೆವೆನ್ ತಂಡದ ನಾಯಕ ಸೌರವ್ ಗಂಗೂಲಿ ಅಜೇಯ 53 ರನ್ ಗಳಿಸಿದ್ರು.
ಬಿಸಿಸಿಐ ಕಾರ್ಯದರ್ಶಿ ಜೈ ಶಾ 39 ರನ್ ಗೆ ಎರಡು ವಿಕೆಟ್ ಉರುಳಿಸಿದ್ರು.








