ಐತಿಹಾಸಿಕ ಶತಕದ ಪಂದ್ಯಕ್ಕೆ ಸಾಕ್ಷಿಯಾದ ಮೆಲ್ಬರ್ನ್ ಅಂಗಣ..!
ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಉಭಯ ತಂಡಗಳಿಗೆ ಐತಿಹಾಸಿಕ ಪಂದ್ಯವಾಗಿದೆ. ಈ ಪಂದ್ಯಕ್ಕೆ ಮೆಲ್ಬರ್ನ್ ಅಂಗಣ ಸಾಕ್ಷಿಯಾಗುತ್ತಿದೆ. ಅಷ್ಟೇ ಅಲ್ಲ, ಈ ಐತಿಹಾಸಿಕ ಪಂದ್ಯದಲ್ಲಿ ಭಾರತದ ಶುಬ್ಮನ್ ಗಿಲ್ ಮತ್ತು ಮಹಮ್ಮದ್ ಸಿರಾಜ್ ಅವರು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ,
ಅಂದ ಹಾಗೇ ಆಸೀಸ್ ಮತ್ತು ಭಾರತ ತಂಡಕ್ಕೆ ಇದು ನೂರನೇ ಟೆಸ್ಟ್ ಪಂದ್ಯ. 1947-48ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಇದೀಗ 2020ರ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಉಭಯ ತಂಡಗಳಿಗೆ ನೂರನೇ ಟೆಸ್ಟ್ ಪಂದ್ಯವಾಗಿದೆ.
ಇನ್ನು ಟೆಸ್ಟ್ ಪಂದ್ಯಗಳ ಅಂಕಿ ಅಂಶಗಳನ್ನು ನೋಡುವುದಾದ್ರೆ ಆಸ್ಟ್ರೇಲಿಯಾವೇ ಮೇಲುಗೈ ಸಾಧಿಸಿರೋದು ಸ್ಪಷ್ಟವಾಗುತ್ತಿದೆ. ಕಳೆದ 99 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ 43 ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿದೆ. ಭಾರತ 28 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಇನ್ನುಳಿದ 27 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಒಂದು ಪಂದ್ಯ ಟೈ ಆಗಿದೆ.
ಅದೇ ರೀತಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 13 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಡಿವೆ. ಇಲ್ಲೂ ಕೂಡ ಆಸ್ಟ್ರೇಲಿಯಾವೇ ಪಾರುಪತ್ಯ ಸ್ಥಾಪಿಸಿದೆ. ಆಸೀಸ್ ಎಂಟು ಪಂದ್ಯಗಳನ್ನು ಗೆದ್ರೆ, ಟೀಮ್ ಇಂಡಿಯಾ ಗೆದ್ದಿರುವುದು ಮೂರು ಪಂದ್ಯಗಳನ್ನು ಮಾತ್ರ. ಎರಡು ಪಂದ್ಯಗಳು ಡ್ರಾಗೊಂಡಿವೆ. 2018ರ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಭಾರತ 137 ರನ್ ಗಳಿಂದ ಭಾರತ ಗೆದ್ದುಕೊಂಡಿತ್ತು.
2020ರ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿದೆ. ಇದೀಗ ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಬಾಕ್ಸಿಂಡ್ ಡೇ ಟೆಸ್ಟ್ ಪಂದ್ಯವನ್ನು ಗೆದ್ದು ಅಂತರವನ್ನು ಸಮಗೊಳಿಸಿ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವ ತವಕದಲ್ಲಿದೆ.
ಆದ್ರೆ ಈ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಹೀಗಾಗಿ ತಂಡವನ್ನು ಅಜಂಕ್ಯಾ ರಹಾನೆ ಅವರು ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಕೆಲವೊಂದು ಬದಲಾವಣೆಗಳು ಕೂಡ ಆಗಿವೆ. ಪೃಥ್ವಿ ಶಾ ಬದಲು ಶುಬ್ಮನ್ ಗಿಲ್ ತಂಡವನ್ನು ಸೇರಿಕೊಂಡಿದ್ದಾರೆ. ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ಮಹಮ್ಮದ್ ಶಮಿ ಬದಲು ಮಹಮ್ಮದ್ ಸಿರಾಜ್ ಮತ್ತು ವೃದ್ದಿಮಾನ್ ಸಾಹ ಬದಲು ರಿಷಬ್ ಪಂತ್ ತಂಡದಲ್ಲಿದ್ದಾರೆ. ಆದ್ರೆ ಅನುಭವಿ ಕೆ.ಎಲ್. ರಾಹುಲ್ ಅವರಿಗೆ 11ರ ಬಳಗದಲ್ಲಿ ಸ್ಥಾನ ನೀಡಿಲ್ಲ. ಟೀಮ್ ಮ್ಯಾನೇಜ್‍ಮೆಂಟ್ ನ ಈ ನಿರ್ಧಾರಕ್ಕೆ ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳು ಕಿಡಿ ಕಾರಿದ್ದಾರೆ.