ಬಾಕ್ಸಿಂಗ್ ಡೇ ಟೆಸ್ಟ್ -ಟೀಮ್ ಇಂಡಿಯಾಗೆ ಎಂಟು ವಿಕೆಟ್ ಗಳ ಜಯ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಎಂಟು ವಿಕೆಟ್ ಗಳಿಂದ ಪರಾಭವಗೊಳಿಸಿದೆ.
ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಂತರವನ್ನು 1-1ರಿಂದ ಸಮಗೊಳಿಸಿದೆ. ಅಲ್ಲದೆ ಮೊದಲ ಟೆಸ್ಟ್ ಪಂದ್ಯದ ಹೀನಾಯ ಸೋಲಿಗೆ ಟೀಮ್ ಇಂಡಿಯಾ ಮೆಲ್ಬರ್ನ್ ನಲ್ಲಿ ಸೇಡು ತೀರಿಸಿಕೊಂಡಿದೆ. ಈ ಹಿಂದೆ 2018ರ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ ಭಾರತ ಜಯ ದಾಖಲಿಸಿತ್ತು.
ನಾಲ್ಕನೇ ದಿನ ಆರು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದ್ದ ಆಸ್ಟ್ರೇಲಿಯಾ 200 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಕ್ಯಾಮರೂನ್ ಗ್ರೀನ್ ಆಕರ್ಷಕ 45 ರನ್ ಗಳಿಸಿದ್ರು. ಅಲ್ಲದೆ ಪ್ಯಾಟ್ ಕಮಿನ್ಸ್ 22 ರನ್ ಹಾಗೂ ಮಿಟ್ಚೆಲ್ ಸ್ಟಾರ್ಕ್ ಅಜೇಯ 14 ರನ್ ದಾಖಲಿಸಿದ್ರು. ನಥಾನ್ ಲಿಯಾನ್ ಮೂರು ರನ್ ಹಾಗೂ ಜೋಶ್ ಹಾಜ್ಲೆವುಡ್ 10 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಟೀಮ್ ಇಂಡಿಯಾ ಪರ ಮಹಮ್ಮದ್ ಸಿರಾಜ್ ಮೂರು ವಿಕೆಟ್ ಪಡೆದ್ರೆ, ಬೂಮ್ರಾ ಎರಡು ವಿಕೆಟ್ ಹಾಗೂ ಅಶ್ವಿನ್ ಮತ್ತು ಜಡೇಜಾ ಎರಡು ವಿಕೆಟ್ ಪಡೆದ್ರು. ಉಮೇಶ್ ಒಂದು ವಿಕೆಟ್ ಪಡೆದ್ರು. ಸ್ನಾಯು ಸೆಳೆತಕ್ಕೊಳಗಾಗಿರುವ ಉಮೇಶ್ ಯಾದವ್ ನಾಲ್ಕನೇ ದಿನವೂ ಬೌಲಿಂಗ್ ಮಾಡಿಲ್ಲ.
ಗೆಲ್ಲಲು 70 ರನ್ ಗಳ ಸುಲಭ ಸವಾಲನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ಮಯಾಂಕ್ ಅಗರ್ ವಾಲ್ 5 ರನ್ ಗೆ ಸೀಮಿತವಾದ್ರೆ, ಚೇತೇಶ್ವರ ಪೂಜಾರ ಮೂರು ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಆದ್ರೆ ಶುಬ್ಮನ್ ಗಿಲ್ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ರು. ಗಿಲ್ 36 ಎಸೆತಗಳಲ್ಲಿ ಏಳು ಬೌಂಡರಿಗಳ ಸಹಾಯದಿಂದ ಅಜೇಯ 35 ರನ್ ಗಳಿಸಿದ್ರೆ, ಅಜಿಂಕ್ಯಾ ರಹಾನೆ ಅಜೇಯ 27 ರನ್ ಗಳಿಸಿದ್ರು.