ಹೈದರಾಬಾದ್: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1000ದ ಗಡಿ ದಾಟಿದ್ದು, ಇದುವರೆಗೂ 29 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮಧ್ಯೆ ಹೈದರಾಬಾದಿನಲ್ಲಿ 74 ವರ್ಷದ ವೃದ್ಧ ಮೃತಪಟ್ಟಿದ್ದು, ಆತನ ರಕ್ತ ಮಾದರಿಯನ್ನು ಪರೀಕ್ಷಿಸಿದಾಗ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ವರ್ಗಕ್ಕೆ ಆ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದೇ ವೈದ್ಯಕೀಯ ಸಿಬ್ಬಂದಿಯೇ ಆತನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಇನ್ನು ಮೃತಪಟ್ಟ ವ್ಯಕ್ತಿಗೆ ಕೊರೊನಾ ಸೋಂಕಿರುವುದು ದೃಢವಾಗುತ್ತಿದ್ದಂತೆ ವೃದ್ಧನ ಮನೆಯವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 21ದಿನಗಳ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಎಲ್ಲಿಯಾದರು ಸಾವು ಸಂಭವಿಸಿದರೆ 20 ಜನಕ್ಕಿಂತ ಹೆಚ್ಚು ಮಂದಿ ಸೇರಲು ಅವಕಾಶ ಇಲ್ಲ ಎಂಬ ಸೂಚನೆ ಇದ್ದಿರುವುದಾಗಿ ವರದಿ ಹೇಳಿದೆ.
ಈ ವ್ಯಕ್ತಿಗೆ ಕೋವಿಡ್ 19 ಸೋಂಕು ಇರುವುದು ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಬಳಿಕ ತಿಳಿದು ಬಂದಿದ್ದು, ವೃದ್ಧನಿಗೆ ಇತರ ಅನಾರೋಗ್ಯ ಕೂಡಾ ಇದ್ದಿರುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಚಂದ್ರಶೇಖರ್ ತಿಳಿಸಿದ್ದಾರೆ.








