ಬೆಂಗಳೂರು: ಮೋದಿ ಅವರ ಆದೇಶದಂತೆ ರಾಜ್ಯದ ಜನತೆ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಅವಧಿ ವಿಸ್ತರಣೆಯಾಗಬಹುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಜನತೆಗೆ ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಕೆಲವು ನಗರ ಪ್ರದೇಶದ ಜನರು ಕಫ್ರ್ಯೂ ಧಿಕ್ಕರಿಸಿ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಲಾಕ್ ಡೌನ್ ಅವಧಿಯ ಬಾಕಿಯಿರುವ 16 ದಿನಗಳಲ್ಲಿ ನಿಮ್ಮ ಮನೆಯಲ್ಲಿಯೇ ಇರಿ. ಮನೆಯವರೊಂದಿಗೆ ಕಾಲ ಕಳೆಯಲು ನಿಮಗೆ ಒದಗಿ ಬಂದ ಒಂದು ಸದಾವಕಾಶ ಎಂದು ಭಾವಿಸಿ. ನೀವು ಎಷ್ಟು ಮನೆಯ ಒಳಗಡೆ ಇರುತ್ತೀರೋ ಅದರಿಂದ ನಿಮಗೆ ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ.
ಸರಕಾರ ನಿಮ್ಮ ಆಹಾರ, ಊಟಕ್ಕೆ ತೊಂದೆರೆಯಾಗದಂತೆ ಎಚ್ಚರವಹಿಸಿದೆ. ಜನರು ಯಾವುದೇ ಸುಳ್ಳು ಸುದ್ದಿಗಳಿಗೆ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ. ನೀವು ಎಷ್ಟು ಕಟ್ಟುನಿಟ್ಟಿನಿಂದ ಮನೆಯಲ್ಲಿ ಇರುವುದನ್ನು ಪಾಲಿಸುತ್ತೀರೋ ಅಷ್ಟು ಬೇಗ ಅಂದರೆ ಏಪ್ರಿಲ್-14 ಕ್ಕೆ ಲಾಕ್ ಡೌನ್ ಮುಗಿಯುವುದು. ಲಾಕ್ ಡೌನ್ ಪರಿಸ್ಥಿತಿ ನಿಮ್ಮ ಕರ್ಫ್ಯೂ ಪಾಲನೆ ಮೇಲೆ ಅವಲಂಬಿತವಾಗಿದೆ ಎಂದು ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.








