ತೆಲಂಗಾಣ: ಕೊರೊನಾ ವೈರಸ್ ಸೋಂಕು ದೇಶದ ಆರ್ಥಿಕತೆಗೆ ಭಾರಿ ಹೊಡೆತ ನೀಡಿದೆ. ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶವನ್ನು 21ದಿನಗಳ ಲಾಕ್ ಡೌನ್ ಮಾಡಲಾಗಿದೆ. ಪರಿಣಾಮ ಎಲ್ಲಾ ರಾಜ್ಯಗಳಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ತೆಲಂಗಾಣ ಸಿಎಂ ಶಾಸಕರ, ಸಚಿವರ ಸಂಬಳವನ್ನು ಕಡಿತಗೊಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸಿಎಂ ಸೇರಿದಂತೆ ಶಾಸಕರು, ಸಚಿವರ ಶೇ.75ರಷ್ಟು ಸಂಬಳವನ್ನು ಕಡಿತಗೊಳಿಸುವುದಾಗಿ ಕೆ.ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ.
ವಿಧಾನಸಭೆಗೆ ಹಾಗೂ ಸ್ಥಳೀಯ ಸಂಸ್ಥೆಗೆ ಆಯ್ಕೆಯಾದ ಜನಪ್ರತಿನಿಧಿಗಳ ಸಂಬಳವನ್ನು ಶೇ.75ರಷ್ಟು ಕಡಿತಗೊಳಿಸಲಾಗುವುದು. ರಾಜ್ಯ ಸ್ವಾಮಿತ್ವದ ಕಾರ್ಪೋರೇಷನ್ಸ್, ರಸ್ತೆ ಸಾರಿಗೆ ಸಂಸ್ಥೆ, ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಪೋರೇಷನ್ ಕೂಡಾ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಸಿಎಂ ಕೆ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.








