ಥಟ್ ಅಂತ ಹೇಳಿ… ಸಿಡ್ನಿ ಪಿಚ್ ನಲ್ಲಿ ಟೀಮ್ ಇಂಡಿಯಾ ಆರಂಭಿಕರಿಗೆ ಮಾರ್ನಸ್ ನ ರಸ ಪ್ರಶ್ನೆಗಳು…!
ನಿನ್ನ ಫೆವರೀಟ್ ಆಟಗಾರ ಯಾರು..? ಕ್ವಾರೆಂಟೈನ್ ನಲ್ಲಿ ಏನು ಮಾಡಿದ್ರಿ..? ಹೀಗೆ ಟೀಮ್ ಇಂಡಿಯಾ ಆರಂಭಿಕರಾದ ಶುಬ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅವರಿಗೆ ಆಸ್ಟ್ರೇಲಿಯಾದ ಯುವ ಬ್ಯಾಟ್ಸ್ ಮೆನ್ ಮಾರ್ನಸ್ ಲಾಬುಸ್ಚಂಗ್ನೆ ಅವರು ರಸ ಪ್ರಶ್ನೆಗಳನ್ನು ಕೇಳಿರುವುದು ಈಗ ಸ್ಟಂಪ್ ಮೈಕ್ ನ ಮೂಲಕ ಬಹಿರಂಗವಾಗಿದೆ.
ಆದ್ರೆ ಇದು ರಸ ಪ್ರಶ್ನೆಗಳಲ್ಲ. ಬದಲಾಗಿ ಆಸೀಸ್ ಆಟಗಾರರ ತಂತ್ರಗಾರಿಕೆ. ಆಟಗಾರರ ಗಮನ ಬೇರೆ ಕಡೆ ಸೆಳೆಯುವಂತಹ ಗೇಮ್ ಪ್ಲಾನ್. ಇದನ್ನು ಅರಿತುಕೊಳ್ಳಲಾರದಷ್ಟು ದಡ್ಡರಲ್ಲ ಟೀಮ್ ಇಂಡಿಯಾ ಆಟಗಾರರು.
ಹೌದು, ಮೈದಾನದಲ್ಲಿ ಸ್ಲೆಡ್ಜಿಂಗ್ ಮಾಡೋದು, ಮಾತಿನ ಸಮರ ನಡೆಸೋದು ಇದು ಆಸ್ಟ್ರೇಲಿಯನ್ ಆಟಗಾರರ ಖಯಾಲಿ. ಆದ್ರೆ ಆಸ್ಟ್ರೇಲಿಯನ್ನರ ಈ ತಂತ್ರಗಾರಿಕೆ ಅವರಿಗೆ ಮುಳುವಾಗುತ್ತಿದೆ ಎಂಬುದು ಬೇರೆ ಮಾತು.
ಈ ಹಿಂದೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತು ಮ್ಯಾಥ್ಯೂ ವಾಡೆ ನಡುವಿನ ತಮಾಷೆಯ ಮಾತುಕತೆ ನೆನಪಿರಬಹುದು. ರಿಷಬ್ ಪಂತ್ ಮ್ಯಾಥ್ಯೂ ವಾಡೆ ಅವರ ತಾಳ್ಮೆಯನ್ನು ಪರೀಕ್ಷೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಮ್ಯಾಥ್ಯೂ ವಾಡೆ ಕೂಡ ತಕ್ಕ ಉತ್ತರವನ್ನು ನೀಡಿದ್ದರು.
ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲೂ ಇದೇ ರೀತಿಯ ತಮಾಷೆಯ ಮಾತುಕತೆ ನಡೆದಿದೆ.
ಸಿಡ್ನಿ ಟೆಸ್ಟ್ ಪಂದ್ಯದ ಭಾರತದ ಇನಿಂಗ್ಸ್ ವೇಳೆ ಈ ತಮಾಷೆಯ ಘಟನೆ ನಡೆದಿದೆ.
ಆಸ್ಟ್ರೇಲಿಯಾದ ಯುವ ಬ್ಯಾಟ್ಸ್ ಮೆನ್ ಮಾರ್ನಸ್ ಲಾಬುಸ್ಚೆಗ್ನೆ ಅವರು ಟೀಮ್ ಇಂಡಿಯಾದ ಆರಂಭಿಕರಾದ ಶುಬ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅವರ ತಾಳ್ಮೆ ಪರೀಕ್ಷಿಸಿದ್ರು.
ಶುಬ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅತ್ಯುತ್ತಮ ಮಟ್ಟದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ಮಾರ್ನಸ್ ಅವರು, ಶುಬ್ಮನ್ ಗಿಲ್ ಬಳಿ ನಿನ್ನ ಫೆವರೀಟ್ ಬ್ಯಾಟ್ಸ್ ಮೆನ್ ಯಾರು ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಶುಬ್ಮನ್ ಗಿಲ್ ಪಂದ್ಯದ ಬಳಿಕ ಹೇಳುತ್ತೇನೆ ಎಂದಿದ್ದರು. ಆದ್ರೂ ಸುಮ್ಮನಿರದ ಮಾರ್ನಸ್.. ಸಚಿನ್ .. ವಿರಾಟ್ ಕೊಹ್ಲಿ.. ಯೋಚನೆ ಮಾಡ್ತಾ ಇದ್ದೀಯಾ ಅಂತ ಕೇಳಿದ್ದಾರೆ. ಆದ್ರೆ ನಂತರ ಗಿಲ್ ಏನು ಉತ್ತರಿಸಲಿಲ್ಲ.
ಆದಾದ ನಂತರ ಮಾರ್ನಸ್ ರೋಹಿತ್ ಬಳಿ, ಕ್ವಾರಂಟೈನ್ ಟೈಮ್ ನಲ್ಲಿ ಏನು ಮಾಡ್ತಾ ಇದ್ದೀರಿ ಅಂತ ಕೇಳಿದ್ದಾರೆ. ಆದ್ರೆ ರೋಹಿತ್ ಶರ್ಮಾ ಮಾರ್ನಸ್ ಪ್ರಶ್ನೆಯನ್ನು ಕೇಳಿಸಿಯೂ ಕೇಳಿಸಿಕೊಳ್ಳದಂತೆ ಕ್ಯಾರೇ ಮಾಡಲಿಲ್ಲ.
ಹೀಗೆ ಪಂದ್ಯದ ವೇಳೆ ಈ ರೀತಿಯ ಮಾತುಕತೆಗಳು ನಡೆಯುವುದು ಸಾಮಾನ್ಯ. ಕೆಲವೊಂದು ಬಾರಿ ಅದು ಅತಿರೇಕಕ್ಕೆ ಹೋಗಿದ್ದೂ ಇದೆ.
ಒಟ್ಟಿನಲ್ಲಿ ಆಟಗಾರರ ಗಮನ ಮತ್ತು ಏಕಾಗ್ರತೆಯನ್ನು ತಪ್ಪಿಸಲು ಎದುರಾಳಿ ಆಟಗಾರರು ಈ ರೀತಿಯ ತಂತ್ರಗಾರಿಕೆ ಮಾಡೋದು ಮಾಮೂಲು. ಅದನ್ನೆಲ್ಲಾ ಮೆಟ್ಟಿ ನಿಂತುಕೊಂಡು ಆಡುವುದೇ ಆಟಗಾರನ ಸಾಮಥ್ರ್ಯ ಮತ್ತು ಪ್ರತಿಭೆ.