ಕೊರೊನಾ ವೈರಸ್ ವಿರುದ್ದ ನಡೆಯುತ್ತಿರುವ ಭಾಗವಾಗಿ ಅನೇಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಡುವೆ ದೆಹಲಿಯ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆ ಕೊರೊನಾ ಹಬ್ಬಿಸಿರುವ ಆತಂಕ ಹೆಚ್ಚು ಮಾಡಿದೆ. ತಮಿಳುನಾಡು ರಾಜ್ಯದಲ್ಲಿ ಒಂದೇ ದಿನದಲ್ಲಿ 50 ಜನರಿಗೆ ಸೋಂಕು ಪತ್ತೆಯಾಗಿದೆ. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ತಬ್ಲಿಫ್ ಏ ಜಮಾತ್ ಸಂಘಟನೆ ಮಾರ್ಚ್ 1 ರಿಂದ 15ರವರೆಗೂ ಧಾರ್ಮಿಕ ಸಭೆಯೊಂದನ್ನು ಆಯೋಜಿಸಿತ್ತು. ಈ ಸಭೆಯಲ್ಲಿ 8000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಇವರಲ್ಲಿ ಕೆಲವರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಹಿನ್ನೆಲೆಯಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದವರನ್ನು ಗುರುತಿಸಿ ಟೆಸ್ಟ್ ಮಾಡಲಾಗುತ್ತಿದೆ. ಅಲ್ಲದೆ ನೂರಾರು ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
ದುರಂತದ ಸಂಗತಿ ಎಂದರೆ ಸೋಂಕು ಕಾಣಿಸಿಕೊಂಡವರು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಬೇರೆ ರಾಜ್ಯಗಳಿಗೆ ಹೋಗಿದ್ದಾರೆ. ಆದ್ದರಿಂದ ಕೊರೊನಾ ಹರಡುವ ಭೀತಿ ಹೆಚ್ಚಾಗಿದೆ. ಮೊದಲ ಹಂತದಲ್ಲಿ 1000 ಜನ ಹೊರ ಬಂದಿದ್ದು ಅವರಲ್ಲ ತೆಲಂಗಾಣದ 6 ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಕರ್ನಾಟಕದ ತುಮಕೂರು ಜಿಲ್ಲೆ ಶಿರಾದ ಒಬ್ಬ ವೃದ್ದ ಕೂಡ ಇದೇ ಕಾರಣಕ್ಕೆ ಬಲಿಯಾಗಿದ್ದು ಕಂಡು ಬಂದಿದೆ. ಇನ್ನೂ 1033 ಜನರನ್ನು ತೆರವುಗೊಳಿಸಲಾಗಿದೆ. ಇವರಲ್ಲಿ 24 ಜನಕ್ಕೆ ಕೊರೊನಾ ಪಾಸಿಟಿವ್ ಇದೆ ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ. ನಿಜಾಮುದ್ದೀನ್ ಸಂಪರ್ಕಿಸುವ ರಸ್ತೆಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ.
ಮತ್ತೊಂದು ಆತಂಕದ ಸಂಗತಿ ಎಂದರೆ ತಮಿಳುನಾಡು ರಾಜ್ಯದಲ್ಲಿ ಮಂಗಳವಾರ ಒಂದೇ ದಿನದಲ್ಲಿ 50 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ 50 ಜನ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ಸರ್ಕಾರ ಹೇಳಿದೆ. ಇದನ್ನು ಸೇರಿಸಿ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 124 ಆಗಿದೆ. 124 ರಲ್ಲಿ 77 ಜನ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ಬಂದವರೇ ಆಗಿದ್ದಾರೆ. ಸೋಂಕು ದೃಡಪಟ್ಟವರಿಗೆ ಕನ್ಯಾಕುಮಾರಿಯಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.








