ವಾಷಿಂಗ್ಟನ್ : ಕೊರೊನಾ ವೈರಸ್ ನಿಂದಾಗಿ ತನ್ನ ದೇಶದ ಸಹಸ್ರಾರು ಮಂದಿ ಮೃತಪಟ್ಟರೂ, ವಿಶ್ವದಲ್ಲಿ ಇಷ್ಟೆಲ್ಲಾ ತೊಂದರೆಗಳಾಗುತ್ತಿದ್ದರೂ ಚೀನಾಗೆ ಮಾತ್ರ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಕೊರೊನಾ ಸೋಂಕು ಹುಟ್ಟಲು ಹಾಗೂ ಹರಡಲು ಮೂಲ ಕಾರಣವೆಂದೇ ಬಿಂಬಿತವಾಗಿರುವ ವೆಟ್ ಮಾರ್ಕೆಟ್ ಅನ್ನು ಅದೀಗ ಪುನಃ ಆರಂಭಿಸಿದೆ. ಬಾವಲಿ, ಪ್ಯಾಂಗೋಲಿನ್, ಮೊಲ, ನಾಯಿ ಸೇರಿದಂತೆ ಎಲ್ಲಾ ಬಗೆಯ ಪಶು, ಪಕ್ಷಿ, ಕೀಟಗಳನ್ನು ಈ ಮಾರುಕಟ್ಟೆಯಲ್ಲೀಗ ಮಾರಾಟ ಮಾಡಲಾಗುತ್ತಿದೆ.
ಚೀನಾದ ಈ ನಡೆ ಮತ್ತೊಮ್ಮೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ಇದೊಂದು ಅತ್ಯಂತ ಅಪಾಯಕಾರಿ ನಿರ್ಧಾರ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಕೊರೊನಾ ವೈರಸ್ ಮೊದಲು ಚೀನಾದ ಇದೇ ವೆಟ್ ಮಾರುಕಟ್ಟೆಯಲ್ಲಿನ ಬಾವಲಿಯಲ್ಲಿ ಕಾಣಿಸಿಕೊಂಡು, ಅದು ಇನ್ನೊಂದು ಪ್ರಾಣಿಗೆ ತಗುಲಿ ಅಲ್ಲಿಂದ ಮನುಷ್ಯರಿಗೆ ಹರಡಿದೆ ಎಂದೇ ಇಲ್ಲಿಯವರೆಗೆ ನಂಬಲಾಗಿದೆ.
ಈ ಹಿನ್ನೆಲೆ ಯಾವುದೇ ಕಾರಣಕ್ಕೂ ವೆಟ್ ಮಾರುಕಟ್ಟೆಯನ್ನು ಆರಂಭಿಸಬಾರದು ಎಂದು ಹಲವಾರು ವಿಜ್ಞಾನಿಗಳು, ವೈದ್ಯಕೀಯ ತಜ್ಞರು ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರರು ಈಗಾಗಲೇ ಹಲವಾರು ಬಾರಿ ಎಚ್ಚರಿಕೆ ಕೊಟ್ಟಿದ್ದಾರೆ. ಆದ್ರೆ ಚೀನಾ ಸರ್ಕಾರ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಮತ್ತೆ ಮಾರುಕಟ್ಟೆ ಆರಂಭಿಸಿರುವುದು ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ.








