ಬಳ್ಳಾರಿ: ಜನವರಿ 16ರಂದು ಕೊರೊನಾ ಲಸಿಕೆ ಪಡೆದಿದ್ದ ಸಂಡೂರು ಸರ್ಕಾರಿ ಆಸ್ಪತ್ರೆ ಡಿ-ಗ್ರೂಪ್ ನೌಕರ ಮೃತಪಟ್ಟಿದ್ದಾರೆ. ಆದರೆ, ಈತನ ಸಾವು ಲಸಿಕೆಯಿಂದ ಅಲ್ಲ, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಬಳ್ಳಾರಿ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಸಂಡೂರು ಸರ್ಕಾರಿ ಆಸ್ಪತ್ರೆ ಡಿ-ಗ್ರೂಪ್ ನೌಕರ ನಾಗರಾಜ ಬಾಳಪ್ಪ(43), ಕೊರೊನಾ ಲಸಿಕೆ ಪಡೆದ ಬಳಿಕ ಮೃತಪಟ್ಟಿದ್ದಾರೆ. ಆದರೆ, ಕೊರೊನಾ ವ್ಯಾಕ್ಸಿನ್ ಪಡೆದಿದ್ದಕ್ಕೆ ನಾಗರಾಜ ಸಾವಿಗೀಡಾಗಿಲ್ಲ, ಬದಲಿಗೆ ಹೃದಯಘಾತದಿಂದ ಸಾವಿಗೀಡಾಗಿದ್ದಾನೆ ಎಂದು ಬಳ್ಳಾರಿ ಡಿಎಚ್‍ಒ ಜನಾರ್ಧನ್ ಸ್ಪಷ್ಟನೆ ನೀಡಿದ್ದಾರೆ.
ನಾಗರಾಜ್ ಅವರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿತ್ತು. ಸೋಮವಾರ(ಇಂದು) ಕರ್ತವ್ಯಕ್ಕೆ ಹಾಜರಾಗಿದ್ದಾಗಲೇ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ನಾಗರಾಜ್ ಹೃದಯಘಾತದಿಂದ ಸಾವಿಗೀಡಾಗಿದ್ದಾನೆ ಎಂದು ವರದಿ ಬಂದಿದೆ. ಕೊರೊನಾ ವ್ಯಾಕ್ಸಿನ್ ನಿಂದ ಯಾವುದೇ ಪರಿಣಾಮವಾಗಿಲ್ಲ. ನಾಗರಾಜ್ ಅವರಿಗೆ ಲಸಿಕೆ ಕೊಟ್ಟ ವೈಯಲ್‍ನಲ್ಲಿ ಬೇರೆಯವರಿಗೂ ಲಸಿಕೆ ನೀಡಲಾಗಿದೆ. ಆವರಿಗೆ ಏನೂ ಸಮಸ್ಯೆ ಆಗಿಲ್ಲ. ಹೀಗಾಗಿ ವ್ಯಾಕ್ಸಿನ್ ಬಗ್ಗೆ ಯಾರೂ ಕೂಡ ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಲಸಿಕೆಯಿಂದ ಮೃತಪಟ್ಟಿಲ್ಲ: ಸುಧಾಕರ್
ಸಂಡೂರು ಸರ್ಕಾರಿ ಆಸ್ಪತ್ರೆ ಡಿ-ಗ್ರೂಪ್ ನೌಕರ ನಾಗರಾಜ್ ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಮೃತಪಟ್ಟಿದ್ದಾಋಎ ಎನ್ನುವುದು ವದಂತಿ ಅಷ್ಟೇ. ಅವರಿಗೆ ಮಧುಮೇಹ ಇತ್ತು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಕೊರೊನಾ ಲಸಿಕೆ ಪಡೆದ ಬಳಿಕ ಯಾವುದೇ ಅಡ್ಡ ಪರಿಣಾಮ ಕಂಡು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಬಂದ ಬಳಿಕವಷ್ಟೇ ಮಾಹಿತಿ ನೀಡುವುದಾಗಿ ಸುಧಾಕರ್ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಲಸಿಕೆ ಪಡೆದವರಿಗೆ ಅಲರ್ಜಿ
ಕೊರೊನಾ ಲಸಿಕೆ ಪಡೆದ ಚಿತ್ರದುರ್ಗ ಜಿಲ್ಲೆಯ ವ್ಯಕ್ತಿಯೊಬ್ಬರು ಅಲರ್ಜಿಯಿಂದ ಬಳಲುತ್ತಿದ್ದರು. ಆದರೆ, ಅವರು ಕೆಲಕಾಲ ಅಲರ್ಜಿಯಿಂದ ಬಳಲಿದ್ದು ನಿಜ. ಈಗ ಎಲ್ಲ ಸರಿಹೋಗಿದೆ ಎಂದು ಚಿತ್ರದುರ್ಗ ಜಿಲ್ಲೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








