ಉಡುಪಿ: ಸಂಪುಟ ವಿಸ್ತರಣೆ ನಂತರ ಉಂಟಾದ ಭಿನ್ನಮತ, ಸಿಡಿ ಗದ್ದಲದಿಂದ ಬೇಸತ್ತಿದ್ದ ಮುಖ್ಯಮಂತ್ರಿ ಬಿ.ಎಸ್ ಕೃಷ್ಣನನಾಡು ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳ ಟೆಂಪಲ್ ರನ್ ಮುಗಿಸಿ ರಾಜಧಾನಿಗೆ ವಾಪಸ್ ಆಗಿದ್ದಾರೆ.
ನಿನ್ನೆ ಮಧ್ಯಾಹ್ನವೇ ಉಡುಪಿಗೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ, ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಗೋಹತ್ಯೆ ಕಾಯ್ದೆ ಜಾರಿ ಬಂದಿರುವುದರ ಸಂಕೇತವಾಗಿ ಕರಂಬಳ್ಳಿ ದೇವಸ್ಥಾನದಲ್ಲೇ ಗೋಪೂಜೆ ನೆರವೇರಿಸಿದ್ದರು. ಇಂದು ಬೆಳಿಗ್ಗೆ ಕುಂಭಾಶಿಯ ಆನೆಗುಡ್ಡೆ ಗಣಪತಿ ಸನ್ನಿದಾನದಲ್ಲಿ ವಿಶೇಷ ಪೂಜೆಯಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದರು.

ಆನೆಗುಡ್ಡೆ ಗಣಪತಿ ದೇಗುಲದಲ್ಲಿ 1008 ತೆಂಗಿನ ಕಾಯಿ ಗಣಹೋಮ ನಡೆಸಿದ ಯಡಿಯೂರಪ್ಪ, ಸಂಕಷ್ಟಗಳಿಂದ ಮುಕ್ತಿ ನೀಡುವಂತೆ ವಿಘ್ನ ವಿನಾಯಕನಲ್ಲಿ ಬೇಡಿಕೊಂಡರು.
ನಂತರ ಕಾಪು ತಾಲೂಕಿನ ಉಚ್ಚಿಲ ಗ್ರಾಮದ ಶ್ರೀಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಲಾಲಾಜಿ ಆರ್.ಮೆಂಡನ್, ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.

ಬಳಿಕ ಕಾಪು ತಾಲೂಕಿನ ಹೆಜಮಾಡಿ ಕೊಡಿಯಲ್ಲಿ ಮೀನುಗಾರಿಕೆ ಬಂದರು ಯೋಜನೆಗೆ ಬಿಎಸ್‍ವೈ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಕಳೆದ ಬಜೆಟ್‍ನಲ್ಲಿ ಬಂದರು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದೆ. 180 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ಪ್ರೋತ್ಸಾಹ, ವಿದೇಶಗಳಿಗೆ ಮೀನು ರಫ್ತು ಹೆಚ್ಚಳ, ಉದ್ಯೋಗ ಸೃಷ್ಟಿಗೆ ಮೀನುಗಾರಿಕೆ ಬಂದರುಗಳು ನೆರವಾಗಲಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ಹೆಜಮಾಡಿ ಕೊಡಿ ಬಂದರು ನಿರ್ಮಾಣದಿಂದ ಮಲ್ಪೆ ಬಂದರಿನ ಮೇಲೆ ಒತ್ತಡ ಕಡಿಮೆಯಾಗಲಿದೆ. 2 ವರ್ಷದಲ್ಲಿ ಹೆಜಮಾಡಿ ಬಂದರು ಕಾಮಗಾರಿ ಪೂರ್ಣಗೊಂಡು ಮೀನುಗಾರಿಕೆಗೆ ಲಭ್ಯವಾಗಲಿದೆ. ಗುತ್ತಿಗೆದಾರರಿಗೆ ಹಣಕಾಸಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು, ಜತೆಗೆ ಕಳಪೆ ಕಾಮಗಾರಿ ನಡೆಸದೆ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ. ಮೀನುಗಾರರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಮೀನುಗಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








