ಬೆಳಗಾವಿ : ತಾನು ಬೆಳೆದ ಕಲ್ಲಂಗಡಿ ಬೆಳೆಯನ್ನು ರೈತನೇ ತನ್ನ ಕೈಯಾರೆ ನಾಶ ಮಾಡಿದ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ. ಖೇಮಲಾಪೂರ ಗ್ರಾಮದ ಸಿದ್ದೇಶ್ವರ ಸನದಿ ಎಂಬ ಯುವ ರೈತ ಲಕ್ಷಾಂತರ ರೂಪಾಯಿ ಸಾಲ ಮಾಡಿ ತನ್ನ ಮೂರು ಎಕರೆ ಜಮೀನನಲ್ಲಿ ಕಲ್ಲಂಗಡಿ ಹಾಗೂ ಎರಡು ಎಕರೆ ಕುಂಬಳಕಾಯಿ, ಹಿರೇಕಾಯಿ ಬೆಳೆದಿದ್ದ. ಕಲ್ಲಂಗಡಿ ಬೆಳೆ ಫಲವತ್ತಾಗಿ ಬೆಳೆದು ಸುಮಾರು 80-90 ಟನ್ ಹಣ್ಣು ಬಂದಿದೆ. ಕೊರೊನಾ ವೈರಸ್ ಎಫೆಕ್ಟ್ ನಿಂದ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಾಗಾಟ ಮತ್ತು ಮಾರುಕಟ್ಟೆ ಇಲ್ಲದೆ ರೈತ ಕಂಗಾಲಾಗಿದ್ದಾನೆ.
ಹಣ್ಣು ನಾಶವಾಗಬಾರದೆಂದು ಸುತ್ತ ಮುತ್ತ ಗ್ರಾಮಸ್ಥರಿಗೆ ಉಚಿತವಾಗಿ ಕೊಟ್ಟಿದ್ದಾರೆ. ಅಲ್ಲದೆ ಇನ್ನೂ ಉಳಿದ ಸುಮಾರು 40-50 ಟನ್ ಕಲ್ಲಂಗಡಿ ಹಣ್ಣನ್ನು ನೆಲಕ್ಕೆ ಎಸೆದು ನಾಶ ಪಡಿಸುತ್ತಿದ್ದಾರೆ. ಸದ್ಯ ರೈತ 10 ರಿಂದ 12 ಲಕ್ಷ ರುಪಾಯಿ ನಷ್ಟ ಅನುಭವಿಸಿದ್ದು, ಸರ್ಕಾರ ಬೆಳೆಗಾಗಿ ಖರ್ಚು ಮಾಡಿದ ಹಣವನ್ನಾದರೂ ಪರಿಹಾರವಾಗಿ ನೀಡಬೇಕೆಂದು ಒತ್ತಾಯಿಸಿದ್ದಾರೆ.








