ಕೊರೊನಾ ಹೊಡೆತಕ್ಕೆ ದೇಶವೇ ಬೆಚ್ಚಿಬಿದ್ದಿದೆ. ಹಾಗಾಗಿ ದೇಶವನ್ನು 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಕೊರೊನಾ ಹರಡದಂತೆ ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾರ್ಚ್ 19 ರಂದು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದರು. ಇದಾದ ಬಳಿಕ ಇನ್ನೊಮ್ಮೆ ಮಾತನಾಡಿದ ಅವರು, ದೇಶ ಕೊರೊನೊ ವೈರಸ್ ವಿರುದ್ದ ಹೋರಾಟ ನಡೆಸಬೇಕಾದರೆ ಲಾಕ್ ಡೌನ್ ಅನಿವಾರ್ಯ ಎಂದು ಹೇಳಿದ್ದರು. ಹಾಗಾಗಿ ದೇಶವನ್ನು ಲಾಕ್ ಡೌನ್ ಮಾಡಲಾಗಿತ್ತು. ಆದರೂ ಸಹ ದೇಶದಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೊರೊನಾ ವೈರಸ್ ಹರಡಿದ ನಂತರ ಮೂರನೇ ಬಾರಿ ಪಿ.ಎಂ ಮೋದಿ ಮಾತನಾಡುತ್ತಿದ್ದಾರೆ. ಆದರೆ ಈ ಹಿಂದೆ ಎರಡು ಬಾರಿ, ರಾತ್ರಿ 8 ಗಂಟೆಗೆ ಮಾತನಾಡಿದ್ದ ಅವರು ಇಂದು ಬೆಳಿಗ್ಗೆ 9 ಗಂಟೆಗೆ ಮಾತನಾಡಲಿದ್ದಾರೆ. ಹಾಗಾಗಿ ಸಾಕಷ್ಟು ಕುತೂಹಲ ಮೂಡಿಸಿದೆ. ಜೊತೆಗೆ ಮೋದಿ ದೇಶದ ಜನರಿಗೆ ಯಾವ ಸಂದೇಶ ನೀಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸಹಜವಾಗಿ ಮೋದಿ ತಮ್ಮ ಲೈವ್ ನಲ್ಲಿ ಅರ್ಧ ಗಂಟೆಗೆ ಮಾತನಾಡುತ್ತಾರೆ. ಇಂದು ಬೆಳಿಗ್ಗೆ 9 ಗಂಟೆಗೆ 5 -7 ನಿಮಿಷದ ವಿಡಿಯೋ ಸಂದೇಶ ನೀಡಲಿದ್ದಾರೆ ಎನ್ನಲಾಗಿದೆ.








