ದೇಶದ ಅಲ್ಲಲ್ಲಿ ಕೋವಿಡ್ 19 ವೈರಸ್ ಸೋಂಕು ಪರೀಕ್ಷೆಗೆ ಆಗಮಿಸಿದ್ದ ವೈದ್ಯರು, ಸಹಾಯಕ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಗಳು ವರದಿಯಾಗಿದ್ದವು. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣಗಳಲ್ಲಿನ ತಪ್ಪಿತಸ್ಥರ ಮೇಲೆ 1980ರ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅನ್ವಯ (ಎನ್.ಎಸ್.ಎ) ಪ್ರಕರಣ ದಾಖಲಿಸಲಾಗಿದೆ.
ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗಿಯಾಗಿದ್ದ 960 ವಿದೇಶಿಗರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಪ್ರಕಟಿಸಿದೆ. ಇದರೊಂದಿಗೆ ಅವರು ಭವಿಷ್ಯದಲ್ಲಿ ಮತ್ತೆಂದೂ ಭಾರತಕ್ಕೆ ಕಾಲಿಡಂತೆ ಮಾಡಲಾಗಿದೆ. ಇವರಲ್ಲಿ ನಾಲ್ವರು ಅಮೆರಿಕನ್ನರು, ಒಂಬತ್ತು ಬ್ರಿಟಿಷರು, ಆರು ಚೀನೀಯರು, 379 ಇಂಡೋನೇಷಿಯನ್ನರು, 110, ಬಾಂಗ್ಲಾದೇಶೀಯರು, 63 ಮ್ಯಾನ್ಮಾರ್ ಪ್ರಜೆಗಳು, 33 ಲಂಕನ್ನರು, 77 ಕಿರ್ಗಿಸ್ತಾನ್ ಪ್ರಜೆಗಳು, 75 ಮಲೇಷಿಯನ್ನರು, 65 ಥಾಯ್ಲೆಂಡ್‌ನವರು, 12 ವಿಯೆಟ್ನಾಂ ಪ್ರಜೆ ಗಳು, 9 ಸೌದಿ ಅರೇಬಿಯಾದವರು ಹಾಗೂ ಮೂವರು ಫ್ರೆಂಚರು ಸೇರಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಕೊರೊನಾ ಪರೀಕ್ಷೆಗೆ ಬಂದ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಎನ್.ಎಸ್.ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಮಂದಿಯನ್ನು ವಿಚಾರಣೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ಹರಡುತ್ತಿದ್ದ ಹಿನ್ನೆಲೆಯಲ್ಲಿ ಆರಿಫ್ ಖಾನ್ (26) ಎಂಬಾತನನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶ ಸರಕಾರ, ಪೊಲೀಸರ ಮೇಲೆ ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಎನ್.ಎಸ್.ಎ ಕಾಯ್ದೆ ಜಾರಿಗೊಳಿಸುವಂತೆ ಜಿಲ್ಲಾಡಳಿತಗಳಿಗೆ ಆದೇಶಿಸಿದೆ. ಬುಧವಾರ ರಾತ್ರಿ ಮುಝಾಫರ್‌ಪುರ್ ನಗರದಲ್ಲಿ ಲಾಕ್ ಡೌನ್ ಉಲ್ಲಂಘಿಸಿದ ಯುವಕರ ತಂಡವೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಸಬ್ ಇನ್ಸ್‌ಪೆಕ್ಟರ್ ಮತ್ತು ಒಬ್ಬ ಪೇದೆ ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎನ್.ಎಸ್.ಎ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.
ಗಾಜಿಯಾಬಾದ್‌ನ ಎಂಎಂಜಿ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ ಗಳ ಬಳಿ ಅಸಭ್ಯವಾಗಿ ವರ್ತಿಸಿದ ತಬ್ಲೀ ಬೆಂಬಲಿಗರ ವಿರುದ್ಧವೂ ಎನ್.ಎಸ್.ಎ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಎಂಎಂಜಿ ಆಸ್ಪತ್ರೆಯಲ್ಲಿನ ತೀವ್ರ ನಿಗಾ ವಲಯಗಳಲ್ಲಿ ಇರುವ ಆರು ಮಂದಿ ತಬ್ಲೀ ಬೆಂಬಲಿಗರು, ಚಿಕಿತ್ಸೆಗಾಗಿ ಬಂದ ವೈದ್ಯರು, ಶುಶ್ರೂಷಕರ ಬಳಿ ಅಸಭ್ಯವಾಗಿ ವರ್ತಿಸಿದ್ದು ಮಾತ್ರವಲ್ಲದೆ, ಇಡೀ ಕ್ವಾರಂಟೈನ್ ಘಟಕದಲ್ಲಿ ಬೆತ್ತಲೆಯಾಗಿ ಅಲೆಯುತ್ತಾ ಎಲ್ಲರಿಗೂ ಕಿರಿಕಿರಿ ಉಂಟು ಮಾಡುತ್ತಿದ್ದರು. ವೈದ್ಯರ ದೂರಿನ ಹಿನ್ನೆಲೆಯಲ್ಲಿ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅನ್ವಯ ಕೇಸು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಯ್ದೆಯ ಪ್ರಮುಖಾಂಶಗಳು :
– ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರುವಂಥ ವ್ಯಕ್ತಿಗಳನ್ನು ಗುರುತಿಸಿ ಈ ಕಾಯ್ದೆಯಡಿ ಸರಕಾರ ಬಂಧಿಸಬಹುದು.
– ಕರ್ತವ್ಯ ನಿರತ ಪೊಲೀಸರು ಹಾಗೂ ಇನ್ನಿತರ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೂ ಈ ಕಾಯ್ದೆ ಪ್ರಯೋಗಿಸಬಹುದು.
– ಬಂಧಿತ ವ್ಯಕ್ತಿಯು ಕಾನೂನು, ನೀತಿ ಸಂಹಿತೆ ಉಲ್ಲಂಘಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲು ಅವಕಾಶ.
– ಕಾಯ್ದೆಯ ಅಡಿ ಬಂಧನಕ್ಕೊಳಗಾದ ವ್ಯಕ್ತಿಯನ್ನು 12 ತಿಂಗಳುಗಳವರೆಗೆ ಯಾವುದೇ ವಿಚಾರಣೆಯಿಲ್ಲದೆ ಬಂಧನದಲ್ಲಿ ಇಡಲು ಅವಕಾಶವಿದ್ದು.
– ಕಾಯ್ದೆಯಡಿ ಬಂಧಿಸಲ್ಪಡುವ ವ್ಯಕ್ತಿಗೆ ಆತನ/ಆಕೆಯ ವಿರುದ್ಧ ಇರುವ ಆರೋಪಗಳನ್ನು ಕನಿಷ್ಠ 10 ದಿನಗಳವರೆಗೆ ತಿಳಿಸದೇ ಇರಲು ಅವಕಾಶವಿದೆ.
– ಬಂಧಿತನು ಆಯಾ ರಾಜ್ಯಗಳ ಹೈಕೋರ್ಟ್‌ಗಳಲ್ಲಿರುವ ಸಲಹಾ ಮಂಡಳಿಗಳಿಗೆ ತನ್ನ ಬಂಧನದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು.
– ಬಂಧಿತನಿಗೆ ತನ್ನ ಪರವಾಗಿ ವಾದ ಮಂಡಿಸಲು ಪ್ರತ್ಯೇಕವಾಗಿ ವಕೀಲರನ್ನು ನೇಮಿಸಿಕೊಳ್ಳುವ ಅವಕಾಶ ಇರುವುದಿಲ್ಲ.








