ಬೆಂಗಳೂರು: ಲಾಕ್ ಡೌನ್ ನಡುವೆ ನಟಿ ಶರ್ಮಿಳಾ ಮಾಂಡ್ರೆ ಅವರು ನಿನ್ನೆ ಮಧ್ಯರಾತ್ರಿ ಕಾರು ಚಲಾಯಿಸಿ ವಸಂತನಗರದ ಅಂಡರ್ ಪಾಸ್ ಬಳಿ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದಿದ್ದಾರೆ. ಇವರು ತಮ್ಮ ಸ್ನೇಹಿತ ಲೋಕೇಶ್ ಜೊತೆ ಜಾಲಿ ರೈಡ್ ಹೋಗಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಶರ್ಮಿಳಾ ಹಾಗೂ ಲೋಕೇಶ್ ಇಬ್ಬರಿಗೂ ಗಾಯವಾಗಿದ್ದು, ರಾತ್ರಿಯೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಹೈಗ್ರೌಂಡ್ಸ್ ಸಂಚಾರಿ ಪೊಲೀಸರು ಕಾರು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ ಶರ್ಮಿಳಾ ಅವರು ತಲೆಮರಿಸಿಕೊಂಡಿದ್ದು, ನಿನ್ನೆ ಅಪಘಾತದ ಬಳಿಕ ಸ್ನೇಹಿತನ ಜೊತೆ ನಟಿ ಶರ್ಮಿಳಾ ಮಂಡ್ರೆ ವಿಕ್ರಂ ಆಸ್ಪತ್ರೆಗೆ ತೆರಳಿದ್ದರಂತೆ. ಆದ್ರೆ ವಿಕ್ರಂ ಆಸ್ಪತ್ರೆಯಲ್ಲಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಲು ಮುಂದಾದಾಗ ಅಲ್ಲಿಂದ ಫೋರ್ಟಿಸ್ ಆಸ್ಪತ್ರೆಗೆ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪಾಸ್ ಪಡೆದು ಜಾಲಿ ರೈಡ್ ಮಾಡಿದ್ರಾ ಮಾಂಡ್ರೆ!
ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕಾದ ನಟಿ ಶರ್ಮಿಳಾ ಜಾಲಿರೈಡ್ ಹೋಗಿ ಆಕ್ಸಿಡೆಂಟ್ ಮಾಡ್ಕೊಂಡು ನಾಪತ್ತೆಯಾಗಿದ್ದಾರೆ. ಈ ಮಧ್ಯೆ ಅಗತ್ಯ ಸೇವೆಗಳ ಹೆಸರಲ್ಲಿ ಪಾಸ್ ಪಡೆದು ಜಾಲಿ ರೈಡ್ ಗೆ ಬಂದಿದ್ರಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಅಪಘಾತವಾದ ಐಷಾರಾಮಿ ಕಾರಿನ ಮೇಲೆ ಅಗತ್ಯ ಸೇವೆಗಳ ಪಾಸ್ ಇತ್ತು. ವಿಆರ್ ವಿ ಹಾಸ್ಪಿಟಾಲಿಟಿ ಹೆಸರಲ್ಲಿ ಕೆಎಸ್ಪಿ ಕ್ಲಿಯರ್ ಪಾಸ್ ಅನ್ನು ಈ ಜಾಗ್ವಾರ್ ಕಾರಿನ ಮೇಲೆ ಅಂಟಿಸಲಾಗಿದೆ.
ಈ ಕಾರಣಕ್ಕಾಗಿ ಅಗತ್ಯ ಸೇವೆಗಳ ಪಾಸ್ ಪಡೆದು ಶರ್ಮಿಳಾ ಮಾಂಡ್ರೆ ಶೋಕಿ ಮಾಡಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ.