ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 24ರಂದು ದೇಶದಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದರು. ಹೀಗಾಗಿ ಪ್ರಯಾಣಿಕ ರೈಲು ಸಂಚಾರ ಸ್ಥಗಿತಗೊಂಡಿತ್ತು. ಸದ್ಯ ಕೇವಲ ಸರಕು ಸಾಗಣೆ ರೈಲುಗಳು ಸಂಚರಿಸುತ್ತಿವೆ. ಇದೀಗ ಏಪ್ರಿಲ್ 15ರಿಂದ ರೈಲು ಸಂಚಾರ ಪುನರಾರಂಭಿಸಲು ಭಾರತೀಯ ರೈಲ್ವೆ ಸಿದ್ಧತೆ ಆರಂಭಿಸಿದೆ. ಸುರಕ್ಷತಾ ಸಿಬ್ಬಂದಿ, ಚಾಲಕರು, ಗಾರ್ಡ್ಗಳು, ಟಿಟಿಇ ಮತ್ತು ಇತರ ಸಿಬ್ಬಂದಿಗೆ ಏಪ್ರಿಲ್ 15ರಂದು ಕರ್ತವ್ಯಕ್ಕೆ ಮರಳಲು ಸಿದ್ಧರಾಗಿರುವಂತೆ ಸೂಚಿಸಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.
ಸರ್ಕಾರದಿಂದ ಹಸಿರುನಿಶಾನೆ ದೊರೆತ ಬಳಿಕ ರೈಲು ಸಂಚಾರ!
ಲಾಕ್ ಡೌನ್ ಮುಂದುವರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಭಾರತೀಯ ರೈಲ್ವೆ ಇಲಾಖೆ ಎಲ್ಲ ವಲಯಗಳಲ್ಲಿ ಸಂಚಾರ ಪುನರಾರಂಭಕ್ಕೆ ಸಂಬಂಧಿಸಿದ ಕ್ರಿಯಾಯೋಜನೆ ಸಿದ್ಧಪಡಿಸುತ್ತಿದೆ. ಆದ್ರೆ ಸರ್ಕಾರದಿಂದ ಹಸಿರುನಿಶಾನೆ ದೊರೆತ ಬಳಿಕವಷ್ಟೇ ರೈಲು ಸಂಚಾರ ಆರಂಭಗೊಳ್ಳಲಿದೆ.
ಇನ್ನು ರಾಜಧಾನಿ, ಶತಾಬ್ಧಿ, ತುರಂತೋ ಸೇರಿದಂತೆ ಶೇ 80ರಷ್ಟು ರೈಲುಗಳು ಏಪ್ರಿಲ್ 15ರಿಂದಲೇ ಸಂಚಾರ ಪುನರಾರಂಭಿಸುವ ನಿರೀಕ್ಷೆ ಇದೆ.








