ರೋಹಿತ್ ಶತಕದ ರಂಗು… ಇಂಗ್ಲೆಂಡ್ ಗೆ ಕಂಟಕವಾದ ಹಿಟ್ ಮ್ಯಾನ್… ಉತ್ತಮ ಸ್ಥಿತಿಯಲ್ಲಿ ಟೀಮ್ ಇಂಡಿಯಾ..!
ಚೆನ್ನೈ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದ ಗೌರವವನ್ನು ಟೀಮ್ ಇಂಡಿಯಾ ಪಡೆದುಕೊಂಡಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಆಕರ್ಷಕ ಶತಕ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ ಅವರ ಅರ್ಧಶತಕ ಮೊದಲ ದಿನದ ಹೈಲೈಟ್ಸ್. ಮೊದಲ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ ಆರು ವಿಕೆಟ್ ಕಳೆದುಕೊಂಡು 300 ರನ್ ದಾಖಲಿಸಿದೆ.
ಟಾಸ್ ಗೆದ್ದ ಟೀಮ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಭರವಸೆಯ ಯುವ ಆಟಗಾರ ಶುಬ್ಮನ್ ಗಿಲ್ ಶೂನ್ಯಕ್ಕೆ ಔಟಾದ್ರು. ಒಲಿಯ್ ಸ್ಟೋನ್ ಅವರ ಮಾರಕ ಎಸೆತವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದ ಶುಬ್ಮನ್ ಗಿಲ್ ಅವರು ಎಲ್ ಬಿ ಬಲೆಗೆ ಬಿದ್ರು.
ನಂತರ ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ತಂಡಕ್ಕೆ ಆಧಾರವಾಗಿ ನಿಂತ್ರು. ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ನಡೆಸಿದ್ರು. ಇನ್ನೊಂದೆಡೆ ಪೂಜಾರ ಎಂದಿನಂತೆ ನಿಧಾನಗತಿಯ ಆಟಕ್ಕೆ ಅಂಟಿಕೊಂಡು ತಂಡದ ರನ್ ಗತಿಯನ್ನು ಏರಿಸಲು ನೆರವಾದ್ರು.
ರೋಹಿತ್ ಮತ್ತು ಪೂಜಾರ ಎರಡನೇ ವಿಕೆಟ್ ಗೆ 84 ರನ್ ಪೇರಿಸಿದ್ರು. ಅಲ್ಲದೆ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕವನ್ನು ದಾಖಲಿಸಿದ್ರು.
ಈ ಹಂತದಲ್ಲಿ ಟೀಮ್ ಇಂಡಿಯಾ ಮತ್ತೆ ಆಘಾತ ಅನುಭವಿಸಿತ್ತು. ಚೇತೇಶ್ವರ ಪೂಜಾರ 21 ರನ್ ಗಳಿಸಿ ಔಟಾದ್ರು. ಹಾಗೇ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯುವ ಮುನ್ನವೇ ಮೋಯಿನ್ ಆಲಿ ಅವರ ಮ್ಯಾಜಿಕ್ ಎಸೆತಕ್ಕೆ ಕ್ಲೀನ್ ಬೌಲ್ಡಾದ್ರು.
ಬಳಿಕ ರೋಹಿತ್ ಜೊತೆಗೂಡಿದ ಅಜಿಂಕ್ಯಾ ರಹಾನೆ ತಂಡಕ್ಕೆ ಬೆನ್ನಲುಬಾಗಿ ನಿಂತ್ರು. ಶರ್ಮಾ ಮತ್ತು ರಹಾನೆ ನಾಲ್ಕನೇ ವಿಕೆಟ್‍ಗೆ 162 ರನ್ ಗಳನ್ನು ಕಲೆ ಹಾಕಿದ್ರು.
ಈ ನಡುವೆ ರೋಹಿತ್ ಶರ್ಮಾ ಆಕರ್ಷಕ ಶತಕವನ್ನು ದಾಖಲಿಸಿದ್ರು. ಹಾಗೇ ರಹಾನೆ ಅರ್ಧಶತಕ ಬಾರಿಸಿದ್ರು.
ದ್ವಿಶತಕದತ್ತ ಮುನ್ನುಗ್ಗುತ್ತಿದ್ದ ರೋಹಿತ್ ಶರ್ಮಾ 161 ರನ್ ಗಳಿಸಿ ತನ್ನ ಹೋರಾಟವನ್ನು ಮುಗಿಸಿದ್ರು. ರೋಹಿತ್ ಶರ್ಮಾ 231 ಎಸೆತಗಳಲ್ಲಿ 18 ಬೌಂಡರಿ ಮತ್ತು ಎರಡು ಸಿಕ್ಸರ್ ಗಳನ್ನು ಸಿಡಿಸಿ ಇಂಗ್ಲೀಷ್ ಬೌಲರ್ ಗಳಿಗೆ ಸುಸ್ತಾಗುವಂತೆ ಮಾಡಿದ್ರು.
ಇನ್ನೊಂದೆಡೆ ರೋಹಿತ್ ಶರ್ಮಾ ಔಟಾಗುತ್ತಿದ್ದಂತೆ ಅಜಿಂಕ್ಯಾ ರಹಾನೆ ಕೂಡ 67 ರನ್ ಗಳಿಸಿ ಮೋಯಿನ್ ಆಲಿಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ರಿಷಬ್ ಪಂತ್ ಜೊತೆ ಸೇರಿದ ಅಶ್ವಿನ್ ಕೂಡ ಹೆಚ್ಚು ಸಮಯ ಕ್ರೀಸ್ ನಲ್ಲಿ ಉಳಿಯಲಿಲ್ಲ. ಅಶ್ವಿನ್ 13 ರನ್ ಗೆ ಸುಸ್ತಾದ್ರು.
ನೈಜ ಆಟದಿಂದಲೇ ಗಮನ ಸೆಳೆದಿರುವ ರಿಷಬ್ ಪಂತ್ ಅಜೇಯ 33 ರನ್ ಹಾಗೂ ಅಕ್ಸರ್ ಪಟೇಲ್ 5 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ ಪರ ಜಾಕ್ ಲೀಚ್ ಮತ್ತು ಮೋಯಿನ್ ಆಲಿ ತಲಾ ಎರಡು ವಿಕೆಟ್ ಪಡೆದ್ರೆ, ಒಲಿಯ್ ಸ್ಟೋನ್ ಮತ್ತು ಜಾಯ್ ರೂಟ್ ತಲಾ ಒಂದು ವಿಕೆಟ್ ಉರುಳಿಸಿದ್ರು.