ಆಂಬುಲೆನ್ಸ್ ಮತ್ತು ವಾಹನಗಳು ಸಿಗದ ಕಾರಣ ಗರ್ಭಿಣಿಯೊಬ್ಬಳು ಹೆದ್ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಬಾಗಲಕೋಟೆಯ ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಮಹಿಳೆಗೆ ಹೆರಿಗೆ ಆಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಸೈದಾಪುರ ಗ್ರಾಮದ ನಿವಾಸಿ 30 ವರ್ಷದ ಮಂಜುಳಾ ಮುದಕಪ್ಪ ಪಿಡಾಯಿಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೊರೊನಾ ಎಫೆಕ್ಟ್ ನಿಂದ ದೇಶವೇ ಲಾಕ್ ಡೌನ್ ಆಗಿದೆ. ಆ ಕಾರಣಕ್ಕಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾವುದೇ ಖಾಸಗಿ ವಾಹನಗಳು ಸಿಗಲಿಲ್ಲ. ಹಾಗಾಗಿ ಗಾಬರಿಗೊಂಡ ಪತಿ ತನ್ನ ಪತ್ನಿ ಮಂಜುಳಾರನ್ನು ತಮ್ಮ ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮುಧೋಳ – ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಮಂಜುಳಾರಿಗೆ ನೋವು ಹೆಚ್ಚಾಗಿದೆ. ಬಳಿಕ ಹೆದ್ದಾರಿಯಲ್ಲೇ ಹೆರಿಗೆ ಆಗಿದೆ. ಇದಾದ ಬಳಿಕ ಸ್ಥಳಕ್ಕೆ ಆಂಬುಲೆನ್ಸ್ ಸ್ಥಳಕ್ಕೆ ಬಂದಿದೆ. ಬಾಣಂತಿಯನ್ನು ಮಹಲಿಂಗಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.








