ಬೂಮ್ರಾ ಗೆ ವಿಶ್ರಾಂತಿ… ಶಮಿ ಮತ್ತು ಭುವಿ ಮತ್ತೆ ಟೀಮ್ ಇಂಡಿಯಾಗೆ ವಾಪಾಸ್..?
ಇಂಗ್ಲೆಂಡ್ ವಿರುದ್ಧದ ಇನ್ನುಳಿದ ಎರಡು ಟೆಸ್ಟ್ ಪಂದ್ಯ, ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳಿಗೆ ಟೀಮ್ ಇಂಡಿಯಾದ ವೇಗಿ ಜಸ್ಪ್ರಿತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾ ಇನ್ನೂ ತಂಡವನ್ನು ಅಂತಿಮಗೊಳಿಸಿಲ್ಲ.
ಆದ್ರೆ ಜಸ್ಪ್ರಿತ್ ಬೂಮ್ರಾ ಅವರು ನಿರಂತರವಾಗಿ ಆಡುತ್ತಿರುವುದರಿಂದ ಚೆನ್ನೈ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಮುಂದಿನ ಮಹತ್ವದ ಸರಣಿಗಳನ್ನು ಗಮನಿಸಿರುವ ಟೀಮ್ ಇಂಡಿಯಾ ಜಸ್ಪ್ರಿತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಆಸ್ಟ್ರೇಲಿಯಾ ಸರಣಿಯ ನಂತರ ಜಸ್ಪ್ರಿತ್ ಬೂಮ್ರಾ ಅವರು ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಈಗಗಲೇ ಸುಮಾರು 180 ಓವರ್ ಗಳನ್ನು ಎಸೆದಿದ್ದಾರೆ. ಇಂಗ್ಲೆಂಡ್ ಸರಣಿ ಸೇರಿದಂತೆ 149.4 ಓವರ್ ಗಳನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಎಸೆದಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿಯ ಅಗತ್ಯ ಇದೆ ಎಂಬುದು ಟೀಮ್ ಮ್ಯಾನೇಜ್ ಮೆಂಟ್ ನ ಅಭಿಮತವಾಗಿದೆ.
ಇನ್ನೊಂದೆಡೆ ಟೀಮ್ ಇಂಡಿಯಾದಲ್ಲಿ ವೇಗದ ಬೌಲರ್ ಗಳಿಗೆ ಕೊರತೆ ಏನು ಇಲ್ಲ. ಆದ್ರೂ ಬೂಮ್ರಾ ಅವರು ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಎಂಬುದರಲ್ಲಿ ಎರಡು ಮಾತಿಲ್ಲ.
ಹಾಗೇ ಗಾಯದಿಂದ ಚೇತರಿಸಿಕೊಂಡಿರುವ ಭುವನೇಶ್ವರ್ ಕುಮಾರ್, ಮಹಮ್ಮದ ಶಮಿ, ತಮಿಳುನಾಡಿನ ವೇಗಿ ಟಿ. ನಟರಾಜನ್, ಶಾರ್ದೂಲ್ ಥಾಕೂರ್ ನವದೀಪ್ ಸೈನಿ ಕೂಡ ಲಭ್ಯರಾಗುತ್ತಿದ್ದಾರೆ. ಅದೇ ರೀತಿ ಮಹಮ್ಮದ್ ಸಿರಾಜ್, ಇಶಾಂತ್ ಶರ್ಮಾ ಕೂಡ ಇದ್ದಾರೆ. ಹೀಗಾಗಿ ಬೂಮ್ರಾಗೆ ಮುಂದಿನ ಪಂದ್ಯಗಳಲ್ಲಿ ವಿಶ್ರಾಂತಿ ನೀಡುವ ಧೈರ್ಯ ಮಾಡುತ್ತಿದೆ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್.
ಈ ನಡುವೆ, ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೆ ರವೀಂದ್ರ ಜಡೇಜಾ ಕೂಡ ಲಭ್ಯರಾಗುವ ಸಾಧ್ಯತೆ ಇದೆ. ಒಂದು ವೇಳೆ ರವೀಂದ್ರ ಜಡೇಜಾ ಅಲಭ್ಯರಾದ್ರೆ, ಆರ್. ಅಶ್ವಿನ್ ಅವರು ಏಕದಿನ ಮತ್ತು ಟಿ-ಟ್ವೆಂಟಿ ಸರಣಿಯಲ್ಲಿ ಆಡಬಹುದು. ಈಗಾಗಲೇ ಅಶ್ವಿನ್ ಅವರು ತಮ್ಮ ಆಲ್ ರೌಂಡ್ ಆಟದಿಂದ ಗಮನ ಸೆಳೆದಿದ್ದಾರೆ. ಹಾಗೇ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.