ಕೊಡಗು | ಕುಮಟೂರಿನಲ್ಲಿ ಹುಲಿ ದಾಳಿಗೆ ಬಾಲಕ ಬಲಿ
ಕೊಡಗು: ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಬಳಿಯ ಕುಮಟೂರು ಗ್ರಾಮದಲ್ಲಿ ಹುಲಿ ದಾಳಿಗೆ 14 ವರ್ಷದ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ.
ಇದರಿಂದ ದಕ್ಷಿಣ ಕೊಡಗಿನಾದ್ಯಂತ ನಿರಂತರವಾಗಿ ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದ ಹುಲಿ, ಇದೀಗ ನರಬಲಿ ಪಡೆದುಕೊಂಡಂತಾಗಿದೆ.
ಕುಮಟೂರಿನ ಕೋಟ್ರಾಂಗಡ ಬಿದ್ದಪ್ಪ ಅವರ ತೋಟ ಕಾರ್ಮಿಕರಾಗಿರುವ ಪಣಿ ಎರವರ ಬಸವ ಅವರ ಪುತ್ರ ಅಯ್ಯಪ್ಪ ಎಂಬ ಬಾಲಕನೇ ಹುಲಿ ದಾಳಿಯಿಂದಾಗಿ ದಾರುಣವಾಗಿ ಸಾವನ್ನಪ್ಪಿದ ಅಮಾಯಕನಾಗಿದ್ದಾನೆ.
ಶ್ರೀಮಂಗಲ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಯ್ಯಪ್ಪ, ಇಂದು ಕೋಟ್ರಾಂಗಡ ಅಶ್ವತ್ ಎಂಬವರ ಕಾಫಿ ತೋಟದಲ್ಲಿ ಸೌದೆಗಾಗಿ ತೆರಳಿದ ಸಂದರ್ಭದಲ್ಲಿ ಸಂಜೆ 5.30 ವೇಳೆ ತೋಟದಲ್ಲಿ ಎದುರಾದ ಹುಲಿವೊಂದು ಬಾಲಕನ ಮೇಲೆರಗಿ ದಾಳಿ ನಡೆಸಿ, ಸ್ಥಳದಲ್ಲೇ ಕೊಂದು ಹಾಕಿರುವ ಎಲ್ಲಾ ಕುರುಹುಗಳು ಲಭ್ಯವಾಗಿದೆ ಎನ್ನಲಾಗಿದೆ.
ಹುಲಿ ದಾಳಿಯಿಂದಾಗಿ ಬಾಲಕನ ಮೆದುಳು ಹೊರಬಂದು ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಸ್ಥಿತಿಯಲ್ಲಿದೆ.
ವಿಷಯ ಈ ಭಾಗದಲ್ಲಿ ಕಾಡ್ಗಿಚ್ಚಿನಂತೆ ಹರಡಿದ ಪರಿಣಾಮ, ಜನರಲ್ಲಿ ಆತಂಕ ಮನೆ ಮಾಡಿದೆ.